ವಿದ್ಯಾರ್ಥಿಗಳಿಗೆ ‘ಯುವನಿಧಿ’ ಮಾಹಿತಿ ನೀಡಿ

Provide information about 'Yuvanidhi' to students
Published on

ಕುಂದಗೋಳ: ತಾಲೂಕಿನ ಪದವಿ ಕಾಲೇಜ್‌ಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆ ಕುರಿತು ಮಾಹಿತಿ ನೀಡಬೇಕು. ಬಡ ವಿದ್ಯಾರ್ಥಿಗಳಿಗೆ ಯೋಜನೆ ತಲುಪಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಿವಾನಂದ ಬೆಂತೂರ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ರಾಜ್ಯದಲ್ಲಿ ಯುವಕರಿಗೆ ಉದ್ಯೋಗದ ಕೊರತೆ ಇದೆ. ಕುಟುಂಬ ನಿರ್ವಹಿಸಬೇಕಾದ ಯುವಕರು ಆರ್ಥಿಕವಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಯುವ ನಿಧಿ ಯೋಜನೆಯಿಂದ ಬಹಳ ಉಪಯುಕ್ತವಾಗಿದೆ ಎಂದರು.

ತಾಲೂಕಿನ ಕೆಲವು ಗ್ರಾಮಗಳಲ್ಲಿ ಗ್ರಾಮಗಳಲ್ಲಿ ಪಡಿತರ ಚೀಟಿದಾರರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿ ಪಡಿತರ ವಿತರಣೆ ಸಮಸ್ಯೆಯಾಗಿದೆ. ಹೀಗಾಗಿ, ಅಂತಹ ಗ್ರಾಮಗಳಲ್ಲಿ ಒಂದೊಂದು ಪಡಿತರ ಅಂಗಡಿ ಹೆಚ್ಚಾಗಬೇಕು. ಪಡಿತರ ಧಾನ್ಯ ವಿತರಣೆ ಮಾಡುವ ಸಂದರ್ಭದಲ್ಲಿ ವಿತರಕರು ಸರ್ವರ್ ಸಮಸ್ಯೆ ಇದೆ ಎಂದು ಹೇಳುತ್ತಾರೆ. ತಮಗೆ ಬೇಕಾದವರಿಗೆ ಬೇಗನೆ ಕೆಲಸ ನಿರ್ವಹಿಸಿಕೊಡುತ್ತಾರೆ. ಬಡವರು ಬಂದರೆ ಸಬೂಬು ಹೇಳುತ್ತಾರೆ. ಬಸ್ ಹೆಚ್ಚಿಗೆ ಮಾಡಬೇಕು. ನಿಲ್ದಾಣದಲ್ಲಿ ಸಿಸಿಟಿವಿ ಅಳವಡಿಕೆ ಮಾಡಬೇಕು ಎಂದು ಸಮಿತಿ ಸದಸ್ಯರು ಆಯಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಆಹಾರ ಇಲಾಖೆ ನಿರೀಕ್ಷಕ ಎಸ್.ಆರ್. ಜೋಶಿ ಮಾತನಾಡಿ, ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ. ಆದರೆ, ತುರ್ತು ಪರಿಸ್ಥಿತಿಯ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಹಾಗೂ 31 ಇ-ಶ್ರಮ ಕಾರ್ಡ್ ಹೊಂದಿದವರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು. ಹೆಸ್ಕಾಂನ ಅಧಿಕಾರಿ ಗೃಹಜ್ಯೋತಿ ಯೋಜನೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ಯುವ ನಿಧಿ ಯೋಜನೆ ಶಕ್ತಿ ಯೋಜನೆ ಬಗ್ಗೆ ವಾಕರಸಾ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದರು.

ತಾಪಂ ಇಒ ಜಗದೀಶ ಕಮ್ಮಾರ, ಸಮಿತಿ ಸದಸ್ಯರು, ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net