

ಮೂಡಿಗೆರೆ: ಹಲವು ವರ್ಷದಿಂದ ಬಾಡಿಗೆ ಮನೆ ಮತ್ತು ಕಾಫಿ ತೋಟದ ಕೂಲಿ ಲೈನ್‌ಗಳಲ್ಲಿ ವಾಸಿಸುತ್ತಿರುವ ನಿವೇಶನ ರಹಿತ ಕುಟುಂಬಗಳಿಗೆ ಕೂಡಲೇ ನಿವೇಶನ ನೀಡಬೇಕು ಎಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಒತ್ತಾಯಿಸಿದರು.
ನಿವೇಶನಕ್ಕೆ ಒತ್ತಾಯಿಸಿ ವಸತಿಗಾಗಿ ಹೋರಾಟ ವೇದಿಕೆ ಕಾರ್ಯಕರ್ತರು ಬುಧವಾರ ಹಳೇ ಮೂಡಿಗೆರೆ ಗ್ರಾಪಂ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, 2018ರಲ್ಲಿ ಸರ್ವೇ ನಂ. 7ರಲ್ಲಿ ನಿವೇಶನಕ್ಕೆ ಕಾಯ್ದಿರಿಸಿದ ಜಾಗದಲ್ಲಿ ಗುಡಿಸಲು ನಿರ್ಮಿಸಿ 1 ತಿಂಗಳು ನಿರಂತರ ಹೋರಾಟ ನಡೆಸಿದ್ದರಿಂದ ತಾಲೂಕು ಆಡಳಿತ ನಿವೇಶನ ರಹಿತರಿಗೆ 7.30 ಎಕರೆ ಜಾಗ ಮಂಜೂರು ಮಾಡಿದೆ ಎಂದರು.
ಇದರಲ್ಲಿ 1ಎಕರೆ ಅಂಬೇಡ್ಕರ್ ಭವನ, 1ಎಕರೆ ಹಾಸ್ಟೆಲ್ ಕಟ್ಟಡ, 1ಎಕರೆ ಪೊಲೀಸ್ ವಸತಿಗೃಹ ನಿರ್ಮಾಣಕ್ಕೆ ಮೀಸಲಿರಿಸಲಾಗಿತ್ತು. ಉಳಿದ 4.30 ಎಕರೆ ಜಾಗ ನಿವೇಶನಕ್ಕಾಗಿ ಕಾಯ್ದಿರಿಸಲಾಗಿದೆ. ಈ ಜಾಗದಲ್ಲಿ 32 ಕುಟುಂಬಗಳು 6 ವರ್ಷದಿಂದ ಗುಡಿಸಲು ನಿರ್ಮಿಸಿ ವಾಸಿಸುತ್ತಿದ್ದಾರೆ. ಈ ಬಡಾವಣೆಗೆ ಗ್ರಾಪಂನಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ ಫಲಾನುಭವಿಗಳ ಪಟ್ಟಿ ತಯಾರಿಸಿ ನಿವೇಶನ ಹಂಚಿಕೆ ಮಾಡಿಲ್ಲ. ಕಳೆದ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ತಾಲೂಕಿನ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಬಾಡಿಗೆ ಮನೆ ಅಥವಾ ಕಾಫಿ ತೋಟದ ಕೂಲಿಲೈನ್‌ನಲ್ಲಿ ವಾಸವಾಗಿದ್ದಾರೆ. ಅವರಿಗೆ ನಿವೇಶನ ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಡೀಮ್ಡ್ ಅರಣ್ಯ ಜಾಗವನ್ನು ಜಂಟಿ ಸವೇ ನಡೆಸಿ ಸುಪ್ರೀಂಕೋರ್ಟಿಗೆ 2017ರಲ್ಲಿ ಅಫಿಡವಿಟ್ ಸಲ್ಲಿಸಲಾಗಿತ್ತು. ಆ ಜಾಗ ಕಂದಾಯ ಇಲಾಖೆ ಕೈ ಸೇರಿದೆ ಡಿಮ್ಡ್ ಜಾಗವನ್ನು ನಿವೇಶನ ಮಾಡಿ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಫಲಾನುಭವಿಗಳಿಗೆ ನಿವೇಶನ ಒದಗಿಸಬೇಕು. ಇದರಲ್ಲಿ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸಬಾರದು ಎಂದು ತಿಳಿಸಿದರು.
ವಸತಿಗಾಗಿ ಹೋರಾಟ ವೇದಿಕೆ ಅಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ಲಕ್ಷ್ಮೀ ಜಾನಕಿ, ಶಾರದಾ, ಮಹಮ್ಮದ್ ಜುಬೇರ್, ರಾಮು, ಗೋಪಿ, ಯಶೋಧ, ಲಲಿತಾ, ವನಜಾ, ಹರೀಶ್, ಭಾಷಾ, ಶೇಖಶ್, ಮಂಜುಳಾ, ಜೋಹರ, ವಿಠಲ, ದರಣಪ್ಪ, ಹಸೈನರ್ ಇತರರಿದ್ದರು,