ಪೌರಕಾರ್ಮಿಕರಿಗೆ ಮನೆ, ನಿವೇಶನ ನೀಡಿ: ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘ ಅಧ್ಯಕ್ಷ ಡಿ.ಆರ್.ರಾಜು ಆಗ್ರಹ

Published on

ಮೈಸೂರು: ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿರುವ ಪೌರಕಾರ್ಮಿಕರಿಗೆ ಮನೆ ಅಥವಾ ನಿವೇಶನ ನೀಡುವಂತೆ ಸರ್ಕಾರವನ್ನು ಕೋರಲಾಗುವುದು ಎಂದು ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘ ಅಧ್ಯಕ್ಷ ಡಿ.ಆರ್.ರಾಜು ಹೇಳಿದರು.

ಮೈಸೂರು ತಾಲೂಕು ಕಡಕೊಳ, ಶ್ರೀರಾಂಪುರ, ಬೋಗಾದಿ ಪಟ್ಟಣ ಪಂಚಾಯಿತಿ, ಇಲವಾಲ ಹಾಗೂ ಸಿದ್ದಲಿಂಗಪುರ ಸೇರಿದಂತೆ ಸುತ್ತಮುತ್ತಲ ಗ್ರಾಪಂಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿರುವ ಪೌರ ಕಾರ್ಮಿಕರು ಹಾಗೂ ಇನ್ನಿತರರಿಗೆ ಸ್ವಂತ ಮನೆಯಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪೌರಕಾರ್ಮಿಕರು, ಸ್ವಚ್ಛತಾ ವಾಹನ ಚಾಲಕರು, ಲೋಡರ್ಸ್, ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ್‌ಗಳು ಹಲವಾರು ವರ್ಷಗಳಿಂದ ಸ್ವಚ್ಛತೆಗಾಗಿ ದುಡಿಯುತ್ತಿದ್ದಾರೆ. ಇವರಿಗೆ ನಿವೇಶನ ನೀಡಬೇಕು. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ 2023ನೇ ಸಾಲಿನಲ್ಲಿ ವಿಶೇಷ ನೇಮಕಾತಿ ಅಡಿಯಲ್ಲಿ ನೇಮಕಗೊಂಡು ಎರಡು ವರ್ಷ ಕಳೆದು ಪ್ರೊಬೇಷನರಿ ಅವಧಿ ಪೂರೈಸಿರುವವರಿಗೆ ಪ್ರಮಾಣಪತ್ರ ನೀಡಬೇಕೆಂದು ಒತ್ತಾಯಿಸಿದರು.

ಕಡಕೊಳ ಪಟ್ಟಣ ಪಂಚಾಯಿತಿ ಸ್ವಚ್ಛತಾ ಪೌರ ಕಾರ್ಮಿಕರಿಗೆ ಬ್ಯಾತಹಳ್ಳಿ ಗ್ರಾಮದಲ್ಲಿ, ಶ್ರೀರಾಂಪುರ ಪಟ್ಟಣ ಪಂಚಾಯಿತಿಯಲ್ಲಿ ಗುರೂರು ಅಥವಾ ಪಾಲಿಕೆಯ ಜಾಗ, ಬೋಗಾದಿ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರಿಗೆ ಇಲವಾಲ ಹೋಬಳಿ, ಮಾದಹಳ್ಳಿಯಲ್ಲಿ, ಇಲವಾಲ ಗ್ರಾಪಂ ಸ್ವಚ್ಛತಾ ಕಾರ್ಮಿಕರಿಗೂ ಇದೇ ಸ್ಥಳದಲ್ಲಿ, ಸಿದ್ದಲಿಂಗಪುರ ಗ್ರಾಪಂ ಸ್ವಚ್ಛತಾ ಕಾರ್ಮಿಕರಿಗೆ ಕೆಸರೆಯಲ್ಲಿ, ತಿ.ನರಸೀಪುರ ಪುರಸಭೆ ಪೌರ ಕಾರ್ಮಿಕರಿಗೆ ಬಂಗಾರಪ್ಪ ಬಡಾವಣೆಯಲ್ಲಿ ನಿವೇಶನ ನೀಡಬೇಕೆಂದು ಕೋರಿದರು.

ಪದಾಧಿಕಾರಿಗಳಾದ ಮಂಚಯ್ಯ, ಕೆ.ನಂಜಪ್ಪ ಬಸವನಗುಡಿ, ಪವಿತ್ರ, ಬೀರಿಹುಂಡಿ ಮಂಜುನಾಥ್, ವಸಂತಕುಮಾರ, ಆರ್. ಅಂಜಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net