ನೀರಿನ ತುರ್ತು ನಿರ್ವಹಣೆಗೆ ಅನುದಾನ ನೀಡಿ

Published on

ಬೈಂದೂರು: ಕರಾವಳಿ ಭಾಗದಲ್ಲಿ ಬೇಸಿಗೆಯ ತೀವ್ರತೆ ಜಾಸ್ತಿಯಾಗುತ್ತಿದ್ದು, ವಿವಿಧ ಜಲ ಮೂಲಗಳಲ್ಲಿ ಕುಡಿಯುವ ನೀರಿನಮಟ್ಟ ಸಂಪೂರ್ಣ ಕುಸಿದಿದೆ. ಹಲವು ಗ್ರಾ.ಪಂ.ಗಳಲ್ಲಿ ಟ್ಯಾಂಕರ್ ನೀರು ಪೂರೈಸುವ ಅನಿವಾರ್ಯತೆ ಕಂಡು ಬಂದಿದೆ. ಹಲವು ಕಡೆ ನೀರಿನ ಮೂಲಗಳ ಲಭ್ಯತೆ ಇದ್ದರೂ ಹಣಕಾಸಿನ ಕೊರತೆಯಿಂದ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನೀರಿನ ತುರ್ತು ಪರಿಸ್ಥಿತಿ ನಿಭಾಯಿಸಲು ಪ್ರತಿ ಕ್ಷೇತ್ರಕ್ಕೆ ಟಾಸ್ಕ್ ಫೋರ್ಸ್‌ನಡಿ ನೀರು ಪೂರೈಕೆಗೆ ಅನುದಾನ ಒದಗಿಸುವಂತೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಅನಿವಾರ್ಯ ಸಂದರ್ಭದಲ್ಲಿ ಟ್ಯಾಂಕರ್ ನೀರು ಪೂರೈಸಬೇಕಾದರೂ ಅನುದಾನ ನೀಡಲು ಬರ ಪೀಡಿತ ತಾಲೂಕು ಘೋಷಣೆ ಆಗಬೇಕೆಂಬ ನಿಯಮ ಹಾಕಲಾಗಿದೆ. ಬರ ಪೀಡಿತವಲ್ಲದ ತಾಲೂಕುಗಳ ಹಲವು ಗ್ರಾಮಗಳಲ್ಲೂ ನೀರು ಪೂರೈಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾಕೃತಿಕ ವಿಕೋಪದಿಂದ ಕುಸಿದು ಹೋಗಿರುವ ಕುಡಿಯುವ ನೀರಿನ ಬಾವಿಗಳನ್ನು ಪುನಃ ನಿರ್ಮಾಣ ಮಾಡಲು ಸರ್ಕಾರದ ಬಳಿ ಅನುದಾನ ಇಲ್ಲವಾಗಿದೆ. ಜಿಲ್ಲಾಡಳಿತ ಕೈ ಚೆಲ್ಲಿ ಕುಳಿತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಕುಡಿಯುವ ನೀರಿನ ಸಮಸ್ಯೆ ಅರ್ಥಮಾಡಿಕೊಂಡು ಬೇಸಿಗೆಯ ತುರ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಟಾಸ್ಕ್ ಫೋರ್ಸ್‌ನಡಿ ತುರ್ತು ಅನುದಾನ ಒದಗಿಸಲು ಸಿಎಂ ಸಿದ್ದ್ಧರಾಮಯ್ಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಮಾಡಿದ್ದಾರೆ.

15 ನೇ ಹಣಕಾಸು ಯೋಜನೆಯಡಿ ನಿರ್ವಹಣಾ ಅನುದಾನ ಬಳಸಿಕೊಂಡು ಟ್ಯಾಂಕರ್ ನೀರು ಪೂರೈಸಲು ಪಂಚಾಯಿತಿಗಳಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದರೂ, ಸಮರ್ಪಕ ಸುತ್ತೋಲೆ ಹೊರಡಿಸದ ಕಾರಣ ಟ್ಯಾಂಕರ್ ನೀರು ಪೂರೈಕೆಗೂ ಸಮಸ್ಯೆಯಾಗುತ್ತಿದೆ. ಹೀಗಾಗಿ ಸರ್ಕಾರ ಅಗತ್ಯ ಸುತ್ತೋಲೆ ಹೊರಡಿಸಬೇಕು - ಗುರುರಾಜ್ ಗಂಟಿಹೊಳೆ ಬೈಂದೂರು ಶಾಸಕ https://www.vijayavani.net/harmony-equality-are-the-core-of-the-constitution https://www.vijayavani.net/tipper-seized-for-illegal-sand-transportation

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net