

ಆಲೂರು : ಆಡಳಿತ ಸೌಧಕ್ಕೆ ಬರುವ ಪ್ರತಿಯೊಬ್ಬರಿಗೂ ಉತ್ತಮ ಸೇವೆ ಒದಗಿಸುವುದು ಅಧಿಕಾರಿಗಳು ಮತ್ತು ಸಿಬಂದಿ ಕರ್ತವ್ಯವಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ಆಡಳಿತ ಸೌಧದ ಮೊದಲ ಅಂತಸ್ತಿನಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಕಚೇರಿಗಳ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಪೂಜಾ, ವಿಧಿ ವಿಧಾನಗಳಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಕಲೇಶಪುರ ಕ್ಷೇತ್ರ ವ್ಯಾಪ್ತಿಗೆ ಬರುವ ಆಲೂರು ತಾಲೂಕಿನ ಆಡಳಿತದ ಸೌಧದ ಕಟ್ಟಡದಲ್ಲಿ ಹಲವು ಕಚೇರಿಗಳ ಕೊಠಡಿಗಳನ್ನ ಉದ್ಘಾಟನೆ ಮಾಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ. ಈವರೆಗೂ ಬಾಡಿಗೆ ಆಧಾರದ ಮೇಲೆ ಪಟ್ಟಣದ ಹಲವು ಸ್ಥಳಗಳಲ್ಲಿ ಬೇರೆ ಬೇರೆ ಇಲಾಖೆಯ ಕಚೇರಿಗಳನ್ನ ನಡೆಸಲಾಗುತ್ತಿತ್ತು. ಸಾರ್ವಜನಿಕರು ಇಲಾಖೆಯ ಸೌಲಭ್ಯ ಪಡೆಯಲು ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಲ್ಲಿದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಒಂದೇ ಸೂರಿನಡಿಯಲ್ಲಿ ಎಲ್ಲ ಇಲಾಖೆಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ ಎಂದರು.
ಸಕಲೇಶಪುರ ಉಪ ವಿಭಾಗಾಧಿಕಾರಿ ಶೃತಿ, ತಹಸೀಲ್ದಾರ್ ನಂದಕುಮಾರ್, ಗ್ರೇಡ್-2 ತಹಸೀಲ್ದಾರ್ ಪೂರ್ಣಿಮಾ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಾಹಿರಾಬೇಗಂ ಇತರರು ಇದ್ದರು.