ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಿ

07 sri 01
Published on

ಶ್ರೀಮಂಗಲ: ಹತ್ತು ಎಚ್‌ಪಿವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವುದರ ಜತೆಗೆ ಕಾಳುಮೆಣಸು ಬೆಳೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪ್ತಿಯ ಸೆಸ್‌ನಿಂದ ಮುಕ್ತಗೊಳಿಸಬೇಕು ಎಂದು ಕೊಡಗು ಬೆಳೆಗಾರರ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಮಂಗಳವಾರ ಒಕ್ಕೂಟದ ಅಧ್ಯಕ್ಷ ಕೈಬಿಲೀರ ಹರೀಶ್‌ಅಪ್ಪಯ್ಯ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಆಡಳಿತ ಮಂಡಳಿ ಸಭೆಯಲ್ಲಿ ಒಕ್ಕೊರಲಿನಿಂದ ಸರ್ಕಾರವನ್ನು ಒತ್ತಾಯಿಸಲಾಯಿತು.

ಕಾಫಿ ಬೆಳೆಗಾರರ ಒತ್ತಾಯದ ಮೇರೆಗೆ ಕೊಡಗು ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಉಚಿತವಾಗಿ ವಿದ್ಯುತ್ ಪೂರೈಸುವ ಭರವಸೆ ನೀಡಿದ್ದರು. ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಬಂಧಪಟ್ಟವರಿಗೆ ಪತ್ರ ಬರೆದು ಸೌಲಭ್ಯವನ್ನು ಅನುಷ್ಠಾನಗೊಳಿಸಲು ಸೂಚಿಸಿದ್ದರು. ಆದರೆ ಈವರೆಗೂ ಇದು ಕಾರ್ಯಗತವಾಗಿಲ್ಲ. ಆದರಿಂದ ಕೂಡಲೇ ಆದೇಶವನ್ನು ಜಾರಿಗೆ ತರುವಂತೆ ಆಗ್ರಹಿಸಲಾಯಿತು.

ಸಚಿವರ ಭರವಸೆ ಅನುಷ್ಠಾನಕ್ಕೆ ಬರುವವರೆಗೆ ವಿದ್ಯುತ್ ಬಿಲ್ ಪಾವತಿಸದಿರಲು ಸಭೆಯಲ್ಲಿ ನಿರ್ಧರಿಸಲಾಯಿತು. ಒಂದು ವೇಳೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದರೆ ಒಕ್ಕೂಟದ ಗಮನಕ್ಕೆ ತರುವಂತೆ ಸದಸ್ಯರಿಗೆ ಮನವಿ ಮಾಡಲಾಯಿತು.
ಕಾಳುಮೆಣಸು ಮೇಲಿನ ಸೆಸ್ ಅನ್ನು ಮುಕ್ತಗೊಳಿಸುವ ಮೂಲಕ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡುವಂತೆಯೂ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸೆಸ್ ವಿಧಿಸುವುದರಿಂದ ಬೆಳೆಗಾರರಿಗೆ ಅನನುಕೂಲ ಉಂಟಾಗಲಿದೆ. ಅಲ್ಲದೆ ಇದು ಕೇರಳ ರಾಜ್ಯ ಬೆಳೆ ಎಂದು ಮಾರಾಟ ಮಾಡಲಾಗುತ್ತದೆ. ಇದು ಕೇರಳ ರಾಜ್ಯಕ್ಕೆ ಲಾಭ ತಂದುಕೊಡಲಿದ್ದು, ಕೇಂದ್ರ ಸರ್ಕಾರದಿಂದ ಸಿಗುವ ಸಹಾಯಧನ ಮತ್ತು ಸೌಲಭ್ಯ ಕೇರಳ ರಾಜ್ಯದ ಬೆಳೆಗಾರರ ಪಾಲಾಗುತ್ತಿದೆ. ನಮ್ಮ ರಾಜ್ಯದ ಬೆಳೆಗಾರರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತವಾಯಿತು.

ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ
ಕೊಡಗು ಬೆಳೆಗಾರ ಒಕ್ಕೂಟದ ಮಹಾಸಭೆಯಲ್ಲಿ ಮುಂದಿನ ಅವಧಿಗೆ ಆಡಳಿತ ಮಂಡಳಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಬಾಡಗರಕೇರಿಯ ಕೈಬಿಲೀರ ಹರೀಶ್‌ಅಪ್ಪಯ್ಯ, ಉಪಾಧ್ಯಕ್ಷರಾಗಿ ಅಮ್ಮತ್ತಿಯ ಕೇಚಂಡ ಶಿವಪ್ಪ ಕುಶಾಲಪ್ಪ, ನಾಪೋಕ್ಲುವಿನ ಡಾ.ಸಣ್ಣುವಂಡ ಕಾವೇರಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಪೊರಾಡು ಗ್ರಾಮದ ಅಣ್ಣೀರ ಹರೀಶ್‌ಮಾದಪ್ಪ, ಜಂಟಿ ಕಾರ್ಯದರ್ಶಿಯಾಗಿ ಶ್ರೀಮಂಗಲದ ಬಾಚಂಗಡ ದಾದ ದೇವಯ್ಯ, ಕಾರ್ಯದರ್ಶಿಯಾಗಿ ಕುಟ್ಟದ ಬೊಳ್ಳೇರ ರಾಜ ಸುಬ್ಬಯ್ಯ, ಖಜಾಂಚಿಯಾಗಿ ಟಿ.ಶೆಟ್ಟಿಗೇರಿಯ ಮಾಣೀರ ವಿಜಯ್‌ನಂಜಪ್ಪ, ತಾಂತ್ರಿಕ ಸಲಹೆಗಾರರಾಗಿ ತಿತಿಮತಿಯ ಚೆಪ್ಪುಡೀರ ಶೆರಿಸುಬ್ಬಯ್ಯ, ಪಾಲಿಬೆಟ್ಟದ ಡಾ.ಅಜ್ಜಿನಿಕಂಡ ವಾಸು ಗಣಪತಿ ಅವರನ್ನು ಆಯ್ಕೆ ಮಾಡಲಾಯಿತು.

ಒಕ್ಕೂಟದ ಮಹಿಳಾ ಘಟಕಕ್ಕೆ ಬಿ.ಶೆಟ್ಟಿಗೇರಿಯ ಕಡೇಮಾಡ ಕುಸುಮಾ ಜೋಯಪ್ಪ, ಹುದಿಕೇರಿಯ ತೀತೀರ ಊರ್ಮಿಳಾ ಸೋಮಯ್ಯ ಅವರನ್ನು ಆಯ್ಕೆ ಮಾಡಲಾಯಿತು. ನೂತನ ಆಡಳಿತ ಮಂಡಳಿಯು ಜಿಲ್ಲಾ ಮಟ್ಟದಲ್ಲಿ ವ್ಯವಹರಿಸಲು ಮಹಾಸಭೆಯಲ್ಲಿ ಅಧಿಕಾರ ನೀಡಲಾಯಿತು.

ಕ್ಯಾಂಪ್ಗೊ ಸಂಘಟನೆಯ ಕೆ.ಕೆ.ವಿಶ್ವನಾಥ್, ಬೆಳೆಗಾರರ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ, ಮಾಜಿ ಅಧ್ಯಕ್ಷ ಆದೇಂಗಡ ಅಶೋಕ್, ಕಾರ್ಯದರ್ಶಿ ಜಮ್ಮದ ಮೋಹನ್ ಮಾದಪ್ಪ ಸೇರಿ ಪ್ರಮುಖರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net