ತಿ.ನರಸೀಪುರ : ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿ ಜಾರಿಗಾಗಿ ನ್ಯಾ. ನಾಗಮೋಹನ್ ದಾಸ್ ಅವರು ಸಲ್ಲಿಸಿರುವ ಕೆಲವು ನ್ಯೂನತೆಗಳಿಂದ ಕೂಡಿದ ವರದಿಯನ್ನು ಪರಿಷ್ಕರಿಸಿರುವ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯಬದ್ಧವಾದ ಒಳಮೀಸಲಾತಿ ಸೂತ್ರವನ್ನು ಪ್ರಕಟಿಸಿದ್ದು, ಸರ್ಕಾರದ ಕ್ರಮವನ್ನು ದಲಿತ ಸಂಘರ್ಷ ಸಮಿತಿ ಸ್ವಾಗತಿಸುತ್ತದೆ ಎಂದು ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಹೇಳಿದ್ದಾರೆ.
ರಾಜ್ಯದಲ್ಲಿ ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಒಳಮೀಸಲಾತಿ ಹಂಚಿಕೆ ವಿಚಾರವನ್ನು ಸಮರ್ಪಕವಾಗಿ ಬಗೆಹರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತು ಸಮಾಜ ಕಲ್ಯಾಣ ಸಚಿವ ಡಾ. ಎಚ್. ಸಿ.ಮಹದೇವಪ್ಪ ಅಭಿನಂದನಾರ್ಹರು. ಆದರೆ ಈಗ ಪ್ರಕಟಿಸಲಾಗಿರುವ ವಿಂಗಡಣೆಯ ಮೂರು ಗುಂಪುಗಳಲ್ಲಿ ಹಂಚಿಹೋಗಿರುವ ಸೂಕ್ಷ್ಮ, ಅತಿ ಸೂಕ್ಷ್ಮ ಅಲೆಮಾರಿ ಮತ್ತು ಅರೆ ಅಲೆಮಾರಿ ವಿಮುಕ್ತ ಬುಡಕಟ್ಟು ಸಮುದಾಯಗಳು ಈ ಮೂರೂ ಗುಂಪುಗಳಲ್ಲಿರುವ ಪ್ರಬಲ ಸಮುದಾಯಗಳೊಂದಿಗೆ ಸೆಣಸಲಾರದೆ ಸಾಮಾಜಿಕ ನ್ಯಾಯ ಪಡೆಯಲು ಸಾಧ್ಯವಾಗದೆ ಅವಕಾಶಗಳಿಂದ ವಂಚಿತರಾಗುವ ಅಪಾಯ ಎದುರಾಗಿದೆ ಎಂಬ ಆತಂಕವನ್ನು ಪ್ರಕಟಣೆಯಲ್ಲಿ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಈ ಮೊದಲಿನಿಂದಲೂ ಅವಕಾಶಗಳನ್ನು ಬಳಸಿಕೊಳ್ಳಲಾಗದ ಈ ಅಲೆಮಾರಿ ಸಮುದಾಯಗಳಿಗೆ ಶಿಕ್ಷಣ ಹಾಗೂ ಆರ್ಥಿಕ ಸೌಲಭ್ಯಗಳು ಸುಲಭವಾಗಿ ದಕ್ಕುವ ಹಾಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟು ಸಮುದಾಯಗಳು ಸಾಮಾಜಿಕ ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಇದರ ಜತೆಗೆ ಈ ಸಮುದಾಯಗಳು ಜಾತಿ ಸೂಚಿತ ಪರ್ಯಾಯ ಪದಗಳ ಕಾರಣಕ್ಕಾಗಿ ಜಾತಿ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗದಂತಹ ಸಮಸ್ಯೆಗಳ ಸುಳಿಯಲ್ಲೂ ಸಿಲುಕಿಕೊಂಡಿವೆ. ಹಾಗಾಗಿ ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಎಸ್ಸಿ, ಎಸ್ಟಿ, ಹಾಗೂ ಒಬಿಸಿ ಸಮುದಾಯಗಳ ಸಮಸ್ಯೆಗಳ ನಿವಾರಣೆಗೆ ನ್ಯಾಯಾಂಗ ಆಯೋಗವೊಂದನ್ನು ರಚಿಸಿ ಆಯೋಗದ ಶಿಫಾರಸ್ಸಿನಂತೆ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕೆಂದು ಶಿವಕುಮಾರ್ ಆಗ್ರಹಿಸಿದ್ದಾರೆ.