ಸರ್ಕಾರಿ ಶಾಲೆ, ಅಂಗನವಾಡಿಗಳಿಗೆ ಸೌಲಭ್ಯ ಕಲ್ಪಿಸಿ

dvd protst
ತಾಪಂ ಇಒ ಬಸವರಾಜ ಹಟ್ಟಿಗೆ ಕ್ರೈ ಸಂಸ್ಥೆ ಮುಖಂಡರು ಶುಕ್ರವಾರ ಮನವಿ ಸಲ್ಲಿಸಿದರು.
Published on

ದೇವದುರ್ಗ: ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಮೂಲಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ತಾಪಂ ಇಒ ಬಸವರಾಜ ಹಟ್ಟಿಗೆ ಕ್ರೈ ಸಂಸ್ಥೆ ಮುಖಂಡರು ಶುಕ್ರವಾರ ಮನವಿ ಸಲ್ಲಿಸಿದರು.

ಮಕ್ಕಳು, ತಾಯಂದಿರು ಹಾಗೂ ಗರ್ಭಿಣಿಯರ ಉತ್ತಮ ಆರೋಗ್ಯ ಕಾಪಾಡುವಲ್ಲಿ ಅಂಗನವಾಡಿಗಳು ಉತ್ತಮ ಕೆಲಸ ಮಾಡುತ್ತಿವೆ. ಆದರೆ, ಕೇಂದ್ರಗಳಿಗೆ ಸರಿಯಾದ ಸೌಲಭ್ಯವಿಲ್ಲದೆ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಹಲವು ಕೇಂದ್ರಗಳು ಶಿಥಿಲಾವಸ್ಥೆಗೆ ಬಂದಿದ್ದು, ಕೆಲವು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿವೆ. ಮಳೆಗೆ ಸೋರುತ್ತಿದ್ದು, ಮಕ್ಕಳಿಗೆ ಸೂಕ್ತ ಭದ್ರತೆ ಇಲ್ಲದಂತಾಗಿದೆ ಎಂದು ದೂರಿದರು.

ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಶ್ರಮಿಸುತ್ತಿವೆ. ಆದರೆ, ಸೌಲಭ್ಯವಿಲ್ಲದೆ ಬಡ ಮಕ್ಕಳ ಕಲಿಕೆಗೆ ಹಿನ್ನಡೆಯಾಗಿದೆ. ಹಲವು ಕಟ್ಟಡಗಳು ಬೀಳುವ ಹಂತದಲ್ಲಿದ್ದು ಬಾಗಿಲು, ಕಿಟಕಿ ಎಲ್ಲೆಂದರಲ್ಲಿ ಕಿತ್ತುಹೋಗಿವೆ. ಶೌಚಗೃಹ, ಆಟದ ಮೈದಾನ, ಕುಡಿವ ನೀರು ಸೇರಿ ಅಗತ್ಯ ಸೌಲಭ್ಯವಿಲ್ಲದೆ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಶಾಲೆಗಳಿಗೆ ಉತ್ತಮ ವಾತಾವರಣ ಕಲ್ಪಿಸದ ಕಾರಣ ಮಕ್ಕಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ ಎಂದು ಆರೋಪಿಸಿದರು.

ಕೂಡಲೇ ಶಿಥಿಲಾವಸ್ಥೆ, ಬಾಡಗಿ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಹೊಸ ಬಿಲ್ಡಿಂಗ್ ನಿರ್ಮಿಸಬೇಕು. ಎಲ್ಲ ಕೇಂದ್ರಗಳಿಗೆ ಶುದ್ಧ ಕುಡಿವ ನೀರು, ಪೌಷ್ಟಿಕ ಆಹಾರ, ನೆರಳು-ಬೆಳಕಿನ ವ್ಯವಸ್ಥೆ ಮಾಡಬೇಕು. ಗರ್ಭಿಣಿ, ಬಾಣಂತಿ, ಹಸುಗೂಸುಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು. ಎಲ್ಲ ಸರ್ಕಾರಿ ಶಾಲೆಗಳಿಗೆ ಗುಣಮಟ್ಟದ ಕಟ್ಟಡ ನಿರ್ಮಿಸಬೇಕು. ಶೌಚಗೃಹ, ಆಟದ ಮೈದಾನ, ವಿದ್ಯುತ್ ಸೌಲಭ್ಯ ಕಲ್ಪಿಸಬೇಕು. ಅಗತ್ಯ ಶಿಕ್ಷಕರು, ಪಠ್ಯ ಪುಸ್ತಕ, ಮಕ್ಕಳ ಕಲಿಕಾ ಉಪಕರಣಗಳನ್ನು ಪೂರೈಕೆ ಮಾಡಬೇಕು. ಶಿಕ್ಷಕರ ನೇಮಕ ಮಾಡಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಆಗ್ರಹಿಸಿದರು.

ತಾಲೂಕು ಸಮಾಲೋಚಕ ರಾಮಣ್ಣ ಎನ್.ಗಣೇಕಲ್, ಮಲ್ಲಯ್ಯ ಖಾನಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net