ಅಂಗವಿಕಲ ಮಕ್ಕಳಿಗೆ ಸೌಲಭ್ಯ ದೊರಕಿಸಲಿ

Provide facilities to disabled children
Published on

ಬ್ಯಾಡಗಿ: ಅಂಗವಿಕಲ ಮಕ್ಕಳಿಗೆ ಶೈಕ್ಷಣಿಕ ಹಂತದಲ್ಲಿ ಸರ್ಕಾರದ ಸಹಾಯಧನ ಹಾಗೂ ಉಪಕರಣಗಳನ್ನು ಸಮರ್ಪಕವಾಗಿ ತಲುಪಿಸಬೇಕು ಎಂದು ಕ್ಷೇತ್ರ ಶಿಕ್ಷಣಾಕಾರಿ ಎಸ್.ಜಿ. ಕೋಟಿ ಹೇಳಿದರು.

ಪಟ್ಟಣದ ಬಿಆರ್​ಸಿ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ 2024-25ನೇ ಸಾಲಿನಲ್ಲಿ ಮಂಜೂರಾದ ಗೃಹ ಆಧಾರಿತ ಮಕ್ಕಳಿಗೆ ನೀಡುವ ಪ್ರೋತ್ಸಾಹ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿ 60ಕ್ಕೂ ಹೆಚ್ಚು ಅಂಗವಿಕಲ ಮಕ್ಕಳಿದ್ದಾರೆ. ಇಂತಹ ಮಕ್ಕಳ ಪಾಲನೆಗೆ ಪಾಲಕರಿಗೆ ಸೂಕ್ತ ನಿರ್ದೇಶನ, ಮಾರ್ಗದರ್ಶನ, ಸಹಕಾರ ನೀಡಲಾಗಿದೆ. ಮಕ್ಕಳ ಆರೋಗ್ಯ, ದೈನಂದಿನ ಚಟುವಟಿಕೆ ಕುರಿತು ಪಾಲಕರು, ಶಿಕ್ಷಕರು ನಿಗಾ ಇಡಬೇಕು ಎಂದರು.

ಪ್ರಸಕ್ತ ಸಾಲಿನಲ್ಲಿ ತೀವ್ರತರವಾಗಿ ಹಾಸಿಗೆಯಲ್ಲಿ ಶಿಕ್ಷಣ ಪಡೆಯುತ್ತಿರುವ 7 ಮಕ್ಕಳನ್ನು ಗುರುತಿಸಿ, ಅವರಿಗೆ 3500 ರೂಪಾಯಿ ವೆಚ್ಚದಲ್ಲಿ ವಾಟರ್​ಬೆಡ್, ರಬ್ಬರ್​ಶೀಟ್ ಹಾಗೂ ಸೈಡ್​ಶೀಟ್ ಹಾಸಿಗೆ ವಿತರಿಸಲಾಗಿದೆ. ಶಾಲೆಗಳಲ್ಲಿ ರ್ಯಾಂಪ್​ಗಳು, ವಿಶೇಷ ಶೌಚಗೃಹ ನಿರ್ವಿುಸಲಾಗಿದೆ. ಸೌಲಭ್ಯ ಕೊರತೆಯಿರುವ ಶಾಲೆಗಳಲ್ಲಿದ್ದಲ್ಲಿ ತಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಪತ್ರ ಮೂಲಕ ತಿಳಿಸಬೇಕು ಎಂದು ಶಿಕ್ಷಕರಿಗೆ ತಿಳಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಫ್. ಹುಲ್ಲಾಳ ಮಾತನಾಡಿ, ಪ್ರತಿವರ್ಷವೂ ಅಂಗವಿಕಲ ಮಕ್ಕಳಿಗೆ ಆರೋಗ್ಯ ಶಿಬಿರ ಏರ್ಪಡಿಸುವುದು, ಅಗತ್ಯ ಔಷಧ, ಉಪಕರಣ ಹಾಗೂ ಹೆಚ್ಚಿನ ಚಿಕಿತ್ಸೆಗೆ ವೈದ್ಯರ ಶಿಫಾರಸು ಹಾಗೂ ಇಲಾಖೆ ನಿರ್ದೇಶನದಂತೆ ಚಿಕಿತ್ಸೆಗೆ ಕಳುಹಿಸಲಾಗುತ್ತಿದೆ ಎಂದರು.

ತಾಲೂಕಿನ ವಿವಿಧ ಗ್ರಾಮಗಳಿಂದ 7 ಅಂಗವಿಕಲ ಮಕ್ಕಳ ಪಾಲಕರು ಮಕ್ಕಳೊಂದಿಗೆ ಆಗಮಿಸಿ ಕಿಟ್ ಪಡೆದರು. ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ತಾಲೂಕು ಅಂಗವಿಕಲರ ಸಂಘದ ಅಧ್ಯಕ್ಷ ಪಾಂಡುರಂಗ ಸುತಾರ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಬಿ. ಬೂದಿಹಾಳ, ಶಿಕ್ಷಣ ಸಂಯೋಜಕ ವಿ. ಮೋಹನಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net