

ಮೂಡಿಗೆರೆ: ಕಾರ್ಮಿಕರನ್ನು ಜಾನುವಾರು ಕೊಟ್ಟಿಗೆಗಿಂತ ಕಡೆಯಾಗಿರುವ ಕೂಲಿ ಲೈನಿನಲ್ಲಿರಿಸಿ ಯಾವುದೆ ಸವಲತ್ತು ನೀಡದೆ ಕಾಫಿ ತೋಟದ ಮಾಲೀಕರು ಕಾನೂನು ಉಲ್ಲಂಘಿಸಿ ದುಡಿಸಿಕೊಳ್ಳುತ್ತಿದ್ದರೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕರ್ನಾಟಕ ಮಲೆನಾಡು ಕಾಫಿ ತೋಟ ಕಾರ್ಮಿಕರ ಸಂಘದ ಅಧ್ಯಕ್ಷ ಕೆ.ಕೆ.ಕೃಷ್ಣಪ್ಪ ಆರೋಪಿಸಿದರು.
ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಯಲ್ಲಿ ಶೇ.90 ಕಾಫಿ ತೋಟವನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳದೆ ಬಹುತೇಕ ತೋಟಗಳು ಅನಧಿಕೃತವಾಗಿವೆ. ಜಿಲ್ಲೆಯಲ್ಲಿ 203 ತೋಟಗಳು ಮಾತ್ರ ನೋಂದಾಯಿಸಿಕೊಂಡಿವೆ. ಕಾರ್ಮಿಕರಿಗೆ ವಿಮೆ ಕೂಡ ಮಾಡಿಸಿಲ್ಲ. ಕೆಲಸದ ವೇಳೆ ಅವಘಡಗಳು ಸಂಭವಿಸಿ ಕಾರ್ಮಿಕರು ಮೃತಪಟ್ಟಾಗ ಅಂತ್ಯಕ್ರಿಯೆಗೆ ಸ್ವಲ್ಪ ಹಣ ಕೊಟ್ಟು ಪರಿಹಾರ ನೀಡದೆ ಕಳಿಸುತ್ತಾರೆ. ಗಂಭೀರ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸುತ್ತಿಲ್ಲ. ನಾಲ್ಕೈದು ತಲೆಮಾರಿನಿಂದ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುವ ಶೇ.70 ಕಾರ್ಮಿಕರಿಗೆ ವಾಸಿಸಲು ಮನೆ ಇಲ್ಲದೆ ಕಾಫಿ ತೋಟದ ಕೂಲಿಲೈನ್ ಅಥವಾ ಬಾಡಿಗೆ ಮನೆಯಲ್ಲಿ ವಾಸವಿದ್ದರೂ ಕೇಳುವವರಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಸರ್ಕಾರ ನಿಗದಿಪಡಿಸಿದ 426 ರೂ. ದಿನಗೂಲಿ ನೀಡದೆ 280 ರಿಂದ 350 ರೂ. ನೀಡಿ, ಕನಿಷ್ಠ ವೇತನ ಕಾಯ್ದೆಯನ್ನು ಉಲ್ಲಂಘಿಸುತ್ತಿದ್ದಾರೆ. ಭವಿಷ್ಯನಿಧಿ, ಇಎಸ್‌ಐ, ಬೋನಸ್, ಸಾರಿಗೆ ಭತ್ಯೆ ನೀಡುತ್ತಿಲ್ಲ. ಕಾರ್ಮಿಕರ ಹೆಸರಿನಲ್ಲಿ ತೋಟದ ಮಾಲೀಕರು ಬ್ಯಾಂಕ್ ಖಾತೆ ತೆರೆದು ಚೆಕ್‌ಬುಕ್ ಪಡೆದು ಇರಿಸಿಕೊಳ್ಳುತ್ತಾರೆ. ಅಲ್ಪ ಮೊತ್ತದ ಸಾಲ ನೀಡಿ 10 ವರ್ಷವಾದರೂ ಸಾಲ ತೀರಿಲ್ಲ ಎಂದು ಕಾರ್ಮಿಕರ ವಿರುದ್ಧ ಚೆಕ್ ಬೌನ್ಸ್ ಕೇಸು ದಾಖಲಿಸಿ ಬಡ್ಡಿ ಸಮೇತ ವಸೂಲಿ ಮಾಡುತ್ತಾರೆ. 3 ಜಿಲ್ಲೆಯಲ್ಲಿ ಲಕ್ಷಾಂತರ ಮಂದಿ ಅಸ್ಸಾಂ ಕಾರ್ಮಿಕರಿದ್ದರೂ ಕಾರ್ಮಿಕ ಇಲಾಖೆಯಲ್ಲಿ 1843 ಮಂದಿ ಮಾತ್ರ ನೋಂದಣಿಯಾಗಿದೆ. ಉಳಿದ ಅಸ್ಸಾಂ ಕಾರ್ಮಿಕರ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಮಾಹಿತಿ ಪಡೆದಿಲ್ಲ. ಕಾಫಿ ತೋಟ ನೋಂದಣಿಯಾದರೆ ದಿನಗೂಲಿ, ಕಾರ್ಮಿಕ ವಿಮೆ, ಕಾರ್ಮಿಕರಿಗಾಗಿ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಸುಸಜ್ಜಿತ ಶಾಲೆ, ನಿವೇಶನ, ಮನೆ ಸೇರಿದಂತೆ ಎಲ್ಲ ಸವಲತ್ತುಗಳನ್ನು ಕಾರ್ಮಿಕ ಕಾಯ್ದೆಯಂತೆ ನೀಡಬೇಕಾಗುತ್ತದೆ. ಇದರಿಂದ ನುಣುಚಿಕೊಳ್ಳಲು ತೋಟದ ಮಾಲೀಕರು ತೋಟಗಳನ್ನು ನೋಂದಾಯಿಸಿಕೊಳ್ಳುತ್ತಿಲ್ಲ. ಅಂತಾರಾಜ್ಯ ಕಾರ್ಮಿಕರಿಗೆ ರಾಜ್ಯ ಸರ್ಕಾರ ನಿಗದಿಪಡಿಸಿದ 426 ರೂ.ಗಿಂತ ಹೆಚ್ಚು ವೇತನ ನೀಡಬೇಕೆಂದು ನಿಯಮವಿದ್ದರೂ ಅಸ್ಸಾಂ ಕಾರ್ಮಿಕರಿಗೆ ಅದರ ಅರ್ಧದಷ್ಟೂ ದಿನಗೂಲಿ ನೀಡದೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮೂರೂ ಜಿಲ್ಲೆಯ ಕಾಫಿ ತೋಟದ ಕಾರ್ಮಿಕರಿಗೆ ನಿವೇಶನ ನೀಡಬೇಕು. ಕಾರ್ಮಿಕರ ವಿರುದ್ಧ ತೋಟದ ಮಾಲೀಕರು ದಾಖಲಿಸಿರುವ ಚೆಕ್ ಬೌನ್ಸ್ ಪ್ರಕರಣಗಳಿಗೆ ಸರ್ಕಾರ ಬ್ರೇಕ್ ಹಾಕಬೇಕು. ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಸುವ ತೋಟದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕು. ವಲಸೆ ಕಾರ್ಮಿಕ ಕಾಯ್ದೆ 1971 ಜಾರಿಯಾಗಬೇಕು. 1951 ಮತ್ತು 1954 ಪ್ಲಾಂಟೇಶನ್ ಲೇಬರ್ ಆಕ್ಟ್ ಜಾರಿಗೊಳಿಸಬೇಕು. ಕಾಫಿ ತೋಟದ ಕಾರ್ಮಿಕರಿಗೆ ಕನಿಷ್ಠ 750 ರೂ. ದಿನಗೂಲಿ ನಿಗದಿಪಡಿಸಬೇಕು. ಕಾಫಿ ತೋಟದ ಕಾರ್ಮಿಕರಿಗಾಗಿ ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಬೇಕು. ಕಾರ್ಮಿಕರ ಮಕ್ಕಳಿಗೆ ಉತ್ತಮ ಶಾಲೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಮಲೆನಾಡು ಕಾಫಿ ತೋಟ ಕಾರ್ಮಿಕರ ಸಂಘದ ಕಾರ್ಯದರ್ಶಿ ಬಿ.ಕೆ.ಗೋಪಾಲ್, ಜಿಲ್ಲಾ ಸಮಿತಿ ಸದಸ್ಯ ಲೋಕೇಶ್ ಕಮರಗೋಡು ಇದ್ದರು.