

ವಿಜಯಪುರ : ದೇವನಹಳ್ಳಿ ತಾಲೂಕು ವಿಜಯಪುರ ಹೋಬಳಿಯ ವೆಂಕಟಗಿರಿಕೋಟೆ ರೈಲ್ವೆ ನಿಲ್ದಾಣದ ಬಳಿ ಕಾಲುವೆ ಮುಚ್ಚಿರುವುದರಿಂದ ಮಳೆ ನೀರೆಲ್ಲಾ ರೈಲ್ವೆ ಹಳಿಗಳ ಮೇಲೆ ನಿಲ್ಲುತ್ತಿರುವುದರ ಜತೆಗೆ, ಈ ನೀರು ಹೆಚ್ಚು ಕಾಲ ನಿಲ್ಲುವುದರಿಂದ ಅನೈರ್ಮಲ್ಯ ಕಾಡುತ್ತಿದೆ. ಹೀಗಾಗಿ ಮುಚ್ಚಿರುವ ಕಾಲುವೆ ತೆರವುಗೊಳಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರು ಸಂಸದ ಡಾ.ಕೆ.ಸುಧಾಕರ್ ಅವರ ಗಮನಕ್ಕೆ ತಂದರು.
ವೆಂಕಟಗಿರಿಕೋಟೆಯಲ್ಲಿರುವ ರೈಲ್ವೆ ನಿಲ್ದಾಣ ವೀಕ್ಷಣೆ ಮಾಡಲು ಬಂದಿದ್ದ ಸಂಸದರಿಗೆ ವಿವರಿಸಿದ ಸ್ಥಳಿಯ ಗ್ರಾಮ ಪಂಚಾಯಿತಿ ಸದಸ್ಯ ಆರ್.ಅಮರನಾಥ್, ರೈಲ್ವೆ ನಿಲ್ದಾಣದ ಬಳಿಯಲ್ಲಿ ಸಾರ್ವಜನಿಕ ರಸ್ತೆಯಿದೆ. ಇಲ್ಲಿನ ಜನರು, ರೈಲು ಹಳಿಗಳನ್ನು ದಾಟಿಕೊಂಡು ಹೋಗಬೇಕು. ವೆಂಕಟಗಿರಿಕೋಟೆ ಗ್ರಾಮವು ರೈಲ್ವೆ ಹಳಿಗಳ ಎರಡೂ ಕಡೆಗಳಲ್ಲಿ ವಿಭಾಗಿಸ್ಪಟ್ಟಿದ್ದು, ಜನರು ಪ್ರತಿನಿತ್ಯ ಇಲ್ಲಿ ಓಡಾಡುತ್ತಾರೆ.
ರೈಲ್ವೆ ಇಲಾಖೆಯವರು, ರೈಲ್ವೆ ಹಳಿಗಳ ಸಮೀಪದ ಕಾಲುವೆ ನಿರ್ಮಾಣ ಮಾಡುವ ವೇಳೆ, ಮಣ್ಣು ತೆಗೆದು ಪಕ್ಕದಲ್ಲಿ ಹಾಕಿದ್ದಾರೆ. ಆದರೆ, ವೈಜ್ಞಾನಿಕವಾಗಿ ಕಾಮಗಾರಿ ಮಾಡಿಲ್ಲ. ಈ ಕಾರಣದಿಂದ ಮಳೆ ನೀರು ಹಳಿಗಳ ಮೇಲೆ ತುಂಬಿಕೊಳ್ಳುತ್ತಿದೆ ಎಂದರು. ಇಲ್ಲಿಗೆ ಸಮೀಪದಲ್ಲೆ ಆಂಜನೇಯಸ್ವಾಮಿ ದೇವಾಲಯವಿದ್ದು, ಚರಂಡಿಯಲ್ಲಿ ನಿಂತಿರುವ ನೀರಿನಿಂದ ದುರ್ವಾಸನೆ ಬೀರುತ್ತಿದೆ, ತ್ವರಿತವಾಗಿ ಚರಂಡಿಯ ಪಕ್ಕದಲ್ಲಿ ಹಾಕಿರುವ ಮಣ್ಣು ತೆರವುಗೊಳಿಸಿ ಮಳೆಯ ನೀರು ಸರಾಗವಾಗಿ ಹರಿದು ರಾಜಕಾಲುವೆಗೆ ಸೇರುವಂತೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳಿಯರು ಮನವಿ ಮಾಡಿದರು. ಮನವಿ ಸ್ವೀಕರಿಸಿದ ಸಂಸದ ಡಾ.ಕೆ.ಸುಧಾಕರ್, ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಗೂ ಇಂಜಿನಿಯರ್ಗಳಿಗೆ ಸೂಚನೆ ನೀಡಿ, ಇಲ್ಲಿನ ಸಮಸ್ಯೆ ಬಗೆಹರಿಸಿಕೊಡುವ ಭರವಸೆ ನೀಡಿದರು.
ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ ನೀಡಿ : ಇಲ್ಲಿನ ರೈಲು ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ವೆಂಕಟಗಿರಿಕೋಟೆ ಸೇರಿ ಸುತ್ತಮುತ್ತಲಿನ ಹಳ್ಳಿಗಳಿಂದ ಜನರು, ಬೆಂಗಳೂರಿನ ಕಡೆಗೆ ಉದ್ಯೋಗಕ್ಕಾಗಿ ಹೋಗುತ್ತಾರೆ. ಆದ್ದರಿಂದ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ ನೀಡಿ, ಅಗತ್ಯ ಮೂಲ ಸೌಕರ್ಯಗಳು ಒದಗಿಸಿಕೊಡಬೇಕು ಎಂದು ಸ್ಥಳಿಯರು ಸಂಸದರಿಗೆ ಮನವಿ ಮಾಡಿಕೊಂಡರು.