

ತುಮಕೂರು: ಅಂಗವಿಕಲರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು, ಅವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಿದೆ ಎಂದು ಜಿಪಂ ಸಿಇಒ ಶುಭಾಕಲ್ಯಾಣ್ ಹೇಳಿದರು.
ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಅಂಗವಿಲಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಅಂಗವಿಕಲ ವ್ಯಕ್ತಿಗಳಲ್ಲಿರುವ ಧೈರ್ಯ, ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿ ಪುಟಿದೇಳುವ ಅವರ ಗುಣ ನಮಗೆ ಸದಾ ಸ್ಫೂರ್ತಿ. ಅಂಗವಿಕಲರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದರು.
ಅಂಗವಿಕಲರಿಗೆ ಸಮಾನ ಅವಕಾಶ ಒದಗಿಸಬೇಕು. ಅವರಿಗೆ ಎಲ್ಲ ಸೌಲಭ್ಯಗಳು ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕಿದೆ. ಕರೊನಾ ಸಂದರ್ಭದಲ್ಲಿ ಅಂಗವಿಕಲ ಪುನಃಶ್ಚೇತನಕ್ಕೆ ವಿಆರ್‌ಡಬ್ಲ್ಯೂ, ಎಂಆರ್ ಡಬ್ಲ್ಯೂಗಳು ಸಾಕಷ್ಟು ಶ್ರಮ ವಹಿಸಿ ಕರೊನಾ ಸೇನಾನಿಗಳಾಗಿ ಕೆಲಸ ನಿರ್ವಹಿಸಿರುವುದು ಮಾದರಿ ಎಂದು ಹೇಳಿದರು.
ಅಂಗವಿಕಲರು ಮುಖ್ಯವಾಹಿನಿಯಲ್ಲಿ ಕೆಲಸ ಮಾಡಲು ಉತ್ಸುಕರಾಗಬೇಕು. ಎಲ್ಲ ಇಲಾಖೆಗಳಲ್ಲಿ ಅಂಗವಿಕಲರಿಗೆ ಶೇ.2 ಮೀಸಲಾತಿ ಇದ್ದು, ಸರ್ಕಾರ ಶೇ.5ಕ್ಕೆ ಏರಿಕೆ ಮಾಡಿ ಬಹಳ ವರ್ಷಗಳಾಗಿವೆ. ಸರ್ಕಾರದ ಆದೇಶದಂತೆ ಜಿಪಂ ಸಿಇಒ ಅಂಗವಿಕಲರ ಮೀಸಲಾತಿಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಸಾಕಷ್ಟು ಶ್ರಮಿಸುತ್ತಿದ್ದು ಅಂಗವಿಕಲರು ಸದುಪಯೋಗಪಡಿಸಿಕೊಳ್ಳುವಂತೆ ಜಿಪಂ ಉಪಕಾರ್ಯದರ್ಶಿ ರಮೇಶ್ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜು ಮಾತನಾಡಿ, ಅಂಗವಿಕಲರಿಗೆ ಜಗತ್ತಿನ ಆಗು-ಹೋಗುಗಳಿಗೆ ಸ್ಪಂದಿಸುವ ಬೌದ್ಧಿಕ ಸಾಮರ್ಥ್ಯವಿದೆ. ಕೆಲವೆಡೆ ಅವರಿಗೆ ಇನ್ನಿಲ್ಲದ ಅನುಕಂಪ ತೋರುವುದು ಇದೆ. ಇದು ತಪ್ಪು. ಅಂಗವಿಕಲರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬಲ್ಲರು ಎಂದು ಹೇಳಿದರು.
ವಿವಿಧ ಕ್ಷೇತ್ರದ ಸಾಧಕ ಅಂಗವಿಕಲರಾದ ಕೆ.ಆರ್.ವೀರಭದ್ರಯ್ಯ, ಸಿ.ದರ್ಶನ್, ಎಂ.ನಂದಿನಿ, ಬಸಪ್ಪ ಮಂಗಸುಳಿ, ಮೊಹಮ್ಮದ್ ಮುಜಾಹಿದ್, ಗೋಪಾಲಪ್ಪ, ನಾಗೇಶ್‌ಕುಮಾರ್ ಹಾಗೂ ಸೀತಮ್ಮ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಎಂ.ರಮೇಶ್, ಶಿರಾ ತಾಪಂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಚಿತ್ತಯ್ಯ, ಧನಂಜಯ್ಯ, ಶಿವಕುಮಾರ್, ಶಾರದಮ್ಮ, ಸುಧೀಂದ್ರ ಇದ್ದರು.
ಅಂಗವಿಕಲರ ಸರ್ಟೀಫಿಕೇಟ್‌ಗಾಗಿ ಹಲವಾರು ಮಂದಿ ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಅಂಗವಿಕಲರು ಏಜೆಂಟರ ಮೂಲಕ ಹೋಗದೆ ನೇರವಾಗಿ ವೈದ್ಯರನ್ನು ಭೇಟಿ ಮಾಡಿ ಪ್ರಮಾಣಪತ್ರ ಪಡೆದುಕೊಳ್ಳಿ. ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಅಂಗವಿಕಲರ ಪುನಃಶ್ಚೇತನ ಕೇಂದ್ರ ಸ್ಥಗಿತಗೊಂಡಿದ್ದು, ಅದಕ್ಕೆ ಪುನಃಶ್ಚೇತನ ಮಾಡಬೇಕಿದೆ. ಡಾ.ಟಿ.ಎ.ವೀರಭದ್ರಯ್ಯ ಜಿಲ್ಲಾ ಶಸ್ತ್ರಚಿಕಿತ್ಸಕ