

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಕೂಲಿಕಾರರಿಗೆ ಅನುಕೂಲಕಾರಿ. ಕೂಲಿಕಾರರಿಗೆ ನಿಗದಿತ ಸಮಯದೊಳಗೆ ಕೆಲಸ ನೀಡಬೇಕು. ಕೂಲಿಕಾರರು ಉದ್ಯೋಗ ಅರಸಿ ಗ್ರಾಮದಿಂದ ಗುಳೆ ಹೋಗದಂತೆ ತಡೆಯಲು ನರೇಗಾ ಅಡಿ ಉದ್ಯೋಗ ನೀಡಬೇಕು ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.
ಕಿತ್ತೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಬೇಸಿಗೆಯಲ್ಲಿ ಕುಡಿಯಲು ಮತ್ತು ಬಳಸಲು ನೀರಿನ ಕೊರತೆಯಾಗದಂತೆ ಕ್ರಮ ವಹಿಸಬೇಕು. ಯಾವುದೇ ಗ್ರಾಮದಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ತುರ್ತಾಗಿ ಸ್ಪಂದಿಸಬೇಕು ಎಂದು ಸೂಚಿಸಿದರು.
ಇದೇವೇಳೆ 2025- 26ನೇ ಸಾಲಿನ ನರೇಗಾ ಕ್ರಿಯಾಯೋಜನೆಯ 30.38 ಕೋಟಿ ರೂಪಾಯಿ ವೆಚ್ಚದ ಕೂಲಿ ಕಾರ್ಮಿಕ ಆಯವ್ಯಯವನ್ನು ಬಿಡುಗಡೆ ಮಾಡಿದರು. ತಾಲೂಕಿನಲ್ಲಿ ಕೈಗೊಳ್ಳಲಿರುವ 2,826 ವೈಯಕ್ತಿಕ, 688 ಸಾಮೂಹಿಕ ಸೇರಿ 3,514 ಕಾಮಗಾರಿಗಳಗೆ ಶಾಸಕರು ಚಾಲನೆ ನೀಡಿದರು. ಈ ಕಾಮಗಾರಿಗಳಿಗೆ ಕೂಲಿ ವೆಚ್ಚ 20.24 ಕೋಟಿ ರೂ., 9.78 ಕೋಟಿ ರೂ. ಸಾಮಗ್ರಿ ವೆಚ್ಚ ಒಳಗೊಂಡಿದ್ದು, ಕೂಲಿ ಕಾರ್ಮಿಕರಿಗೆ ಪ್ರತಿದಿನ 349 ರೂ. ಕೂಲಿ ಪಾವತಿ ಆಗಲಿದೆ. ನರೇಗಾ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತಾ.ಪ0. ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ, ತಹಸೀಲ್ದಾರ್ ದೊಡ್ಡಪ್ಪ ಹೂಗಾರ, ಸಹಾಯಕ ನಿರ್ದೇಶಕರಾದ ಚಂದ್ರು ಪೂಜಾರ ಮತ್ತು ಗಿರೀಶ ಕೋರಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.