ಹಾಡಿಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಿ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಅಧ್ಯಕ್ಷ ಹಾಗೂ ಶಾಸಕ ರಮೇಶ್ ಬಂಡಿಸಿದ್ದೇಗೌಡ

2
Published on

ಮೈಸೂರು: ಹಾಡಿಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಯಾವುದೇ ಸಮಸ್ಯೆ ಉಂಟಾದರೂ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ಬಗೆಹರಿಸುವುದಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಅಧ್ಯಕ್ಷ ಹಾಗೂ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿದ್ದಾರೆ.

ವಿಜಯನಗರದಲ್ಲಿರುವ ಸೆಸ್ಕ್ ಪ್ರಧಾನ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಚಾಮರಾಜನಗರ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೈಸೂರು-ಚಾಮರಾಜನಗರ ಜಿಲ್ಲೆಯ ಹಾಡಿಗಳಿಗೆ ವಿದ್ಯುತ್ ಪೂರೈಸಲು ಅಗತ್ಯವಿರುವ ಕೆಲಸವನ್ನು ಅಧಿಕಾರಿಗಳು ಕೂಡಲೇ ಆರಂಭಿಸಬೇಕು. ಆನಂತರದಲ್ಲಿ ಯಾವುದೇ ಅಡೆತಡೆಗಳು ಅಥವಾ ಸಮಸ್ಯೆ ಉಂಟಾದಲ್ಲಿ ಖುದ್ದಾಗಿ ನಾನೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರದ ಹಂತದಲ್ಲಿ ಮಾತುಕತೆ ನಡೆಸಿ ಅನುಮತಿ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಜಿಲ್ಲೆಯ ವ್ಯಾಪ್ತಿಯಲ್ಲಿರುವ 31 ಹಾಡಿಗಳಿಗೆ ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ ಸೆಸ್ಕ್‌ನಿಂದ ಉತ್ತಮ ಸಹಕಾರ ಸಿಕ್ಕಿದೆ. 31 ಹಾಡಿಗಳ 2000 ಕುಟುಂಬಕ್ಕೆ ವಿದ್ಯುತ್ ಪೂರೈಸಲು ಯಾವುದೇ ಸರ್ಕಾರ 42 ಕೋಟಿ ರೂ.ಗಳನ್ನು ಖರ್ಚು ಮಾಡುವುದು ತೀರಾ ವಿರಳ. ಆದರೆ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಆದಾಯದ ಬಗ್ಗೆ ವಿಳಂಬ ಮಾಡದೆ, ಮೂಲಭೂತ ಹಕ್ಕು ಎಂದು ಪರಿಗಣಿಸಿ ವಿದ್ಯುತ್ ಪೂರೈಸಲು ಒಪ್ಪಿಗೆ ನೀಡಿದರು ಎಂದು ತಿಳಿಸಿದರು.

ಆದರೆ, ಹಾಡಿಗಳಿಗೆ ವಿದ್ಯುತ್ ಪೂರೈಕೆ ಮಾಡಲು ಜಿಲ್ಲೆಯ ಹೆಚ್ಚಿನ ಭೂ ಪ್ರದೇಶ ಅರಣ್ಯ ಇಲಾಖೆಗೆ ಸೇರಿರುವುದು ದೊಡ್ಡ ಸವಾಲಾಗಿದೆ. ಇಲ್ಲಿ ವಿದ್ಯುತ್ ಲೈನ್ ಪೂರೈಕೆ ಮಾಡಲು ಕಾನೂನಿನ ತೊಡಕು ಇದೆ. ಅದನ್ನು ಸರಿಪಡಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದರು.

ಜಿಲ್ಲೆಯ ಶೇ.52ರಷ್ಟು ಭೂಪ್ರದೇಶ ಅರಣ್ಯ ಪ್ರದೇಶದಿಂದ ಕೂಡಿರುವ ಕಾರಣ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗುತ್ತಿದೆ. ಹೀಗಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅರಣ್ಯ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕಿದೆ. ಆದರೂ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಪಾಲಾರ್ ಹಾಡಿಗೆ ವಿದ್ಯುತ್ ಸಂಪರ್ಕ ನೀಡಿರುವುದು ನಮಗೆ ಸಿಕ್ಕಿರುವ ದೊಡ್ಡ ಯಶಸ್ಸು ಎಂದು ಹೇಳಿದರು.

ಈಗ ಉಳಿದ ಹಾಡಿಗಳಿಗೂ ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ ಮುಂದಿನ ಕ್ರಮವನ್ನು ಕೈಗೊಳ್ಳಬೇಕಿದೆ. ಇದಕ್ಕಾಗಿ ಮುಂದಿನ ಮೂರು ತಿಂಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಬೇಕಿದ್ದು, ಇದಕ್ಕಾಗಿ ಜಿಲ್ಲಾಡಳಿತದಿಂದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಗೃಹಜ್ಯೋತಿ, ಗಂಗಾ ಕಲ್ಯಾಣ, ಕುಸುಮ್-ಬಿ, ಕುಸುಮ್-ಸಿ ಯೋಜನೆಗಳ ಅನುಷ್ಠಾನ ಸೇರಿದಂತೆ ಸೆಸ್ಕ್‌ನಿಂದ ಕೈಗೊಳ್ಳಲಾಗಿರುವ ಕಾರ್ಯಕ್ರಮಗಳು ಹಾಗೂ ಇತರ ಕೆಲಸಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ (ಪ್ರಭಾರ) ಕೆ.ಎಂ.ಮುನಿಗೋಪಾಲ್ ರಾಜು , ಮುಖ್ಯ ಆರ್ಥಿಕ ಅಧಿಕಾರಿ ಜಿ.ರೇಣುಕಾ, ಮುಖ್ಯ ಪ್ರಧಾನ ವ್ಯವಸ್ಥಾಪಕರು (ತಾಂತ್ರಿಕ ಶಾಖೆ) ಶರಣಮ್ಮ ಎಸ್.ಜಂಗಿನ್, ಪ್ರಧಾನ ವ್ಯವಸ್ಥಾಪಕರು (ಆ ಮತ್ತು ಮಾ. ಸಂ) ಬಿ.ಆರ್ ರೂಪಾ, ಮುಖ್ಯ ಪ್ರಧಾನ ವ್ಯವಸ್ಥಾಪಕಿ (ಆಂತರಿಕ ಪರಿಶೋಧನೆ) ಲಿಂಗರಾಜಮ್ಮ, ಪ್ರಧಾನ ವ್ಯವಸ್ಥಾಪಕ (ಖರೀದಿ) ಎಲ್. ಲೋಕೇಶ್, ಚಾಮರಾಜನಗರ-ಕೊಡಗು ಜಿಲ್ಲೆಗಳ ಅಧೀಕ್ಷಕ ಇಂಜಿನಿಯರ್(ವಿ) ಸೋಮಶೇಖರ್ ಇತರರು ಇದ್ದರು.

ಕೂಡಲೇ ಕೆಲಸ ಆರಂಭಿಸಿ

ಜಿಲ್ಲೆಯ ಹಾಡಿಗಳಿಗೆ ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ ಕೆಲಸ ಮುಂದುವರಿಸುವಂತೆ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ (ಪ್ರಭಾರ) ಕೆ.ಎಂ.ಮುನಿಗೋಪಾಲ್ ರಾಜು ಅವರು ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಲಾಗಿದೆ. ಯಾವುದೇ ಸಮಸ್ಯೆ ಆದಲ್ಲಿ ನಿಗಮದ ಅಧ್ಯಕ್ಷರು, ಜಿಲ್ಲಾಧಿಕಾರಿ ಗಮನಕ್ಕೆ ತಂದರೆ ಅದನ್ನು ಸರಿಪಡಿಸುತ್ತಾರೆ. ಹೀಗಾಗಿ ಯೋಜನೆಗೆ ಸಂಬಂಧಿಸಿದಂತೆ ಕೆಲಸ ಮುಂದುವರಿಸಿ ಎಂದು ತಿಳಿಸಿದರು.

ಗ್ರಾಹಕರು ಹಾಗೂ ರೈತರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಫೀಡರ್ ನಿರ್ವಹಣೆ ಅಭಿಯಾನ, ಟ್ರಾನ್ಸ್‌ಫಾರ್ಮರ್ ನಿರ್ವಹಣೆ ಅಭಿಯಾನವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಜತೆಗೆ ರೈತರಿಗೆ ಸಮರ್ಪಕ ವಿದ್ಯುತ್ ವ್ಯವಸ್ಥೆ ಹಾಗೂ ಪರಿವರ್ತಕಗಳನ್ನು ನೀಡಲು ಕ್ರಮವಹಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net