ಆರ್ಥಿಕ ಸಂಕಷ್ಟ ಇದ್ದರೂ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ: ಮಾಜಿ ಶಾಸಕ ಎಂ.ಕೆ.ಸೋಮಶೇಖರ್

10
Published on

ಮೈಸೂರು: ಮನೆಯಲ್ಲಿ ಎಷ್ಟೇ ಬಡತನ, ಆರ್ಥಿಕ ಸಂಕಷ್ಟ ಇದ್ದರೂ ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವುದರಲ್ಲಿ ಹಿಂದೆ ಬೀಳಬಾರದು. ಶಿಕ್ಷಣ ದೊರೆತಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲಿದೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಹೇಳಿದರು.

ಕುವೆಂಪುನಗರದ ಭಾವಸಾರ್ ಕ್ಷತ್ರಿಯ ಸಮಾಜ, ಶ್ರೀಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ 11ನೇ ವರ್ಷದ ಶ್ರೀಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಯಾವುದೇ ಸಮಾಜದ ಮಕ್ಕಳಿಗೆ ಶಿಕ್ಷಣ ಇಂದು ಅತ್ಯಗತ್ಯ. ಹಾಗಾಗಿ ಮನೆಯಲ್ಲಿ ಎಷ್ಟೇ ಬಡತನ, ಆರ್ಥಿಕ ಸಂಕಷ್ಟ ಇದ್ದರೂ ಸರಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದನ್ನು ಮಾತ್ರ ಮರೆಯಬಾರದು. ಆಗ ಮಾತ್ರ ಮಕ್ಕಳನ್ನು ಭವಿಷ್ಯದ ಆಸ್ತಿಗಳನ್ನಾಗಿ ರೂಪಿಸಲು ಸಾಧ್ಯ ಎಂದರು.

ಕೇವಲ ದುಡ್ಡಿನ ಹಿಂದೆ ಬಿದ್ದರೆ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯವಿಲ್ಲ. ಕುಲಕಸುಬು ಬದುಕಿಗೆ ಮುಖ್ಯ ಆಧಾರ, ಆದರೆ ಶಿಕ್ಷಣ ನೀಡುವುದು ಪಾಲಕರ ಮಹತ್ತರ ಜವಾಬ್ದಾರಿ. ಸಂವಿಧಾನ ಮೀಸಲಾತಿ ನೀಡಿದೆ. ಅದರ ಉಪಯೋಗ ಪಡೆದುಕೊಂಡು ಉಳ್ಳವರ ನಡುವಿನ ಪೈಪೋಟಿಯ ನಡುವೆ ಹೆಚ್ಚು ಶಿಕ್ಷಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.

ಶಿಕ್ಷಣ ದೊರೆತರೆ ಎಲ್ಲ ರಂಗದಲ್ಲೂ ಸಮಾಜ ತನ್ನ ಛಾಪು ಮೂಡಿಸಲು ಸಾಧ್ಯ. ಶಿಕ್ಷಣದ ಜತೆಗೆ ಸಂಸ್ಕಾರವನ್ನು ಕಲಿಸಿಕೊಟ್ಟಾಗ ಮಕ್ಕಳ ಪರಿಪೂರ್ಣತೆ ಪಡೆದುಕೊಳ್ಳುತ್ತವೆ. ಆ ಮೂಲಕ ಸಮಾಜದ ಆಸ್ತಿ ಆಗುತ್ತಾರೆ ಎಂದು ತಿಳಿಸಿದರು.

ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಬಿ.ಯು.ಅಮೂಲ್ಯಾ, ಆರ್.ರಕ್ಷಾ, ಡಿ.ಪ್ರಿಯಾಂಕಾ, ಜಿ.ವಿ.ಲಕ್ಷ್ಮೀ, ಬಿ.ಎ.ಭವಿತಾ, ಬಿ.ಎಂ.ವರ್ಷಿಣಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಆರ್.ನಿಧಿ, ಮಲ್ಲಿಕಾರ್ಜುನ, ಆದರ್ಶ, ವಿ. ವೈಷ್ಣವಿ, ಗೀತಾ ಸಂಭ್ರಮ, ಪಿ.ವಿ.ಮನೋಜ್, ಆರ್.ವಿ.ದೇವಿಪ್ರಸಾದ್, ಎನ್.ಎಸ್.ವೈಷ್ಣವಿ, ಕೆ.ರಕ್ಷಿತಾ ಅವರನ್ನು ಸನ್ಮಾನಿಸಲಾಯಿತು.

ಭಾವಸಾರ್ ಕ್ಷತ್ರಿಯ ಮಂಡಳಿಯ ಅಧ್ಯಕ್ಷ ಶಿವಾಜಿರಾವ್ ರಾಂಪುರೆ, ವಿಠ್ಠಲರುಕ್ಮಿಣಿ ಕಲ್ಯಾಣ ಮಂಟಪದ ಅಧ್ಯಕ್ಷ ಜಯರಾಮ್ ರಾವ್ ಲಾಳಿಗೆ, ಚಾಮುಂಡೇಶ್ವರಿ ಸೇವಾ ಸಮಿತಿ ಅಧ್ಯಕ್ಷ ಬಿ.ಟಿ.ಮಂಜುನಾಥ್ ಬಕರೆ, ಮಾಜಿ ಅಧ್ಯಕ್ಷ ಬಾಬು ತಾಪ್ಸೆ, ಮುಖಂಡರಾದ ನಾಗೇಂದ್ರ ರಾವ್ ಪಾಟಂಕರ್, ಉಮೇಶ್ ನಾಯಕ್, ಸಂಜಯ್ ಕುಮಾರ್ ರಂಪುರೆ, ಗಿರೀಶ್ ಪತಂಗೆ, ರಾಜೇಶ್ ಕುತ್ನಿಕರ್, ಸತ್ಯನಾರಾಯಣ ಪಾಟಂಕರ್, ಗೋಪಾಲಕೃಷ್ಣರಾವ್, ವಾಸುದೇವರಾವ್ ಸಿಂತ್ರೆ, ಬಾಲಾಜಿ ರಾವ್ ನಾಯಕ್, ಹೇಮಂತ್ ಮಾವಾಟ್ಕರ್, ಅನಿಲ್ ಬೇದ್ರೆ, ಸತೀಶ್‌ಕುತ್ನಿಕರ್, ಮಹೇಂದ್ರ ರಾಂಪುರೆ, ಸುರೇಶ್ ವಾಂಜ್ರೆ, ಕೃಷ್ಣ ತಾಪ್ಸೆ, ರಾಘವೇಂದ್ರ ದೊಂಗಡೆ, ವಿನೋದ್ ಹಲಾಲೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net