

ಕೊಪ್ಪಳ: ನಗರದ ಕುಷ್ಟಗಿ ರಸ್ತೆ ಬಜಾರಮಠ ಲೇಔಟ್‌ಗೆ ಸರಿಯಾಗಿ ಕುಡಿವ ನೀರು ಪೂರೈಸುವಂತೆ ಆಗ್ರಹಿಸಿ ನಿವಾಸಿಗಳು ಗುರುವಾರ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ:ಕುಡಿವ ನೀರಿಗಾಗಿ ಮರವಂಜಿ ಗ್ರಾಪಂ ಕಚೇರಿಗೆ ಬೀಗ
ಭಾಗ್ಯನಗರ ಪಪಂ ವ್ಯಾಪ್ತಿಯ ಬಜಾರಮಠ ಲೇಔಟ್‌ಗೆ ಕುಡಿವ ನೀರು ಪೂರೈಸುತ್ತಿಲ್ಲ. ಕೊಪ್ಪಳ ನಗರಸಭೆಯಿಂದ ಪೈಪ್‌ಲೈನ್ ಮಾಡಿ, ಅಲ್ಲಲ್ಲಿ ನಳ ಸಂಪರ್ಕ ನೀಡಲಾಗಿದೆ. ಆದರೆ, ನಗರಸಭೆ ವ್ಯಾಪ್ತಿಗೆ ಬರುವುದಿಲ್ಲವೆಂದು ಅಧಿಕಾರಿಗಳು ನೀರು ಪೂರೈಸುತ್ತಿಲ್ಲ. ಪಪಂ ಅಧಿಕಾರಿಗಳು ದೂರದಲ್ಲಿದ್ದು, ನಗರಸಭೆಯಿಂದಲೇ ನೀರು ಒದಗಿಸಲಾಗುವುದು ಎಂದು ಹೇಳುತ್ತಾರೆ. ಆದರೆ, ತಿಂಗಳುಗಟ್ಟಲೇ ನೀರು ಬಿಡುವುದಿಲ್ಲ. ಬೇಸಿಗೆ ಆರಂಭವಾಗಿದ್ದು, ಸಾಕಷ್ಟು ನೀರಿನ ಸಮಸ್ಯೆ ಎದುರಾಗಿದೆ. ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಯನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಪರಿಹರಿಸಬೇಕು. ಅದರ ಬದಲು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರು.
ನಗರಠಾಣೆ ಪಿಐ ಜಯಪ್ರಕಾಶ ಸ್ಥಳಕ್ಕಾಗಮಿಸಿ ಮಾತನಾಡಿ, ರಸ್ತೆ ತಡೆದು ಪ್ರತಿಭಟಿಸುವುದು ಸರಿಯಲ್ಲ. ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತನ್ನಿ. ನಾವು ಸಹಾಯ ಮಾಡುತ್ತೇವೆ ಎಂದು ಮನವೊಲಿಸಿದರು. ಬಳಿಕ ನಗರಸಭೆಗೆ ತೆರಳಿ ಮನವಿ ಸಲ್ಲಿಸಲಾಯಿತು. ಅಧಿಕಾರಿಗಳು ನೀರು ಪೂರೈಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.
ಸ್ಥಳೀಯರಾದ ನಾಗರಾಜ ಮೇದಾರ, ಮಲಿಯಮ್ಮ ಮೇದಾರ, ಚೌರಪ್ಪ, ಶಾಂತಮ್ಮ ಮೇದಾರ, ಮಂಜಮ್ಮ, ಕೀರಪ್ಪ, ಸೋಮಶೇಖರ, ಪ್ರವೀಣ, ಹುಲುಗಪ್ಪ, ಈರಣ್ಣ, ಸಂಗಮ್ಮ ಇತರರಿದ್ದರು.