

ನಾಪೋಕ್ಲು: ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ರಸ್ತೆಗಳು ಗುಂಡಿ ಬಿದ್ದು ಸಂಚಾರ ಯಾತನೆಮಯವಾಗಿದೆ.. ಇಲಾಖೆ ಅಧಿಕಾರಿಗಳು ಗ್ರಾಮ ಸಭೆಗೆ ಹಾಜರಾಗಿಲ್ಲ..
ಕಕ್ಕಬೆಯ ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೊಂಗೇರ ಶಿಲ್ಪಾ ಲೋಕೇಶ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ 2023-24ನೇ ಸಾಲಿನ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆರೋಪಿಸಿದ ಪರಿಯಿದು. ಜೆಜೆಎಂ ಕಾಮಗಾರಿಯು ಪ್ರಾರಂಭಿಸಿ ಮೂರು ವರ್ಷವಾದರೂ ಪೂರ್ಣವಾಗದ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆಗಳು ಹದಗೆಟ್ಟಿದ್ದು ಸರಿಪಡಿಸಬೇಕು, ಚರಂಡಿ ಸರಿಪಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಯವಕಪಾಡಿ ಗ್ರಾಮದ ಸರ್ವೇ ನಂಬರ್ 250/9 ಮತ್ತು 254ರ ಸರ್ಕಾರಿ ಜಾಗದಲ್ಲಿ ಇದ್ದ ಒತ್ತುವರಿಯನ್ನು ಯಾವುದೇ ಕಾರಣಕ್ಕೂ ಮೀಸಲು ಅರಣ್ಯಕ್ಕೆ ಸೇರಿಸಬಾರದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಮನೆಗಳನ್ನು ನಿರ್ಮಿಸಿಕೊಂಡಿರುವ ಹಾಗೂ ತೋಟ ಮಾಡಿರುವ ಜಾಗವನ್ನು ಯಾವುದೇ ಕಾರಣಕ್ಕೂ ಮೀಸಲು ಅರಣ್ಯಕ್ಕೆ ಬಿಟ್ಟು ಕೊಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟುಹಿಡಿದರು.
ಇದೇ ಸಂದರ್ಭದಲ್ಲಿ ಸಭೆಗೆ ಇಲಾಖಾ ಅಧಿಕಾರಿಗಳು ಹಾಜರಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಮಾತನಾಡಿದ ಗ್ರಾಪಂ ಅಧ್ಯಕ್ಷರು ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಿಳಿಸಿದರು. ನೋಡಲ್ ಅಧಿಕಾರಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಾಲಕೃಷ್ಣ ರೈ ಸೇರಿದಂತೆ ಇತರರು ಇದ್ದರು.