

ಹುನಗುಂದ: ಕುಡಿಯಲು ಸಮರ್ಪಕ ನೀರು ಪೂರೈಸಬೇಕೆಂದು ಆಗ್ರಹಿಸಿ ಕುಂಬಾರ ಓಣಿಯ 1 ಮತ್ತು 3 ನೇ ವಾರ್ಡ್ ನಿವಾಸಿಗಳು ಮೇನ್ ಬಜಾರ್ ಮುಖ್ಯ ರಸ್ತೆಗೆ ತಳ್ಳುವ ಬಂಡಿ ಮತ್ತು ಎಣ್ಣೆಯ ಬ್ಯಾರೆಲ್ ಇಟ್ಟು ಸಂಚಾರ ಸ್ಥಗಿತಗೊಳಿಸಿ ಬುಧವಾರ ಪ್ರತಿಭಟನೆ ನಡೆಸಿದರು.
ಕುಂಬಾರ ಓಣಿಯ ಹಿರಿಯ ಮುಖಂಡ ಅರುಣೋದಯ ದುದ್ಗಿ ಮಾತನಾಡಿ, ಪಟ್ಟಣದ ಬೇರೆ ವಾರ್ಡ್‌ಗಳಲ್ಲಿ ಕುಡಿಯುವ ನೀರು ಪೂರೈಕೆಯಾಗುತ್ತಿದ್ದರೂ ನಮ್ಮ ವಾರ್ಡ್‌ಗಳಲ್ಲಿ ಮಾತ್ರ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ. ವಾರದಿಂದ ನಮಗೆ ನೀರೇ ಬಿಟ್ಟಿಲ್ಲ. ಹೀಗಾಗಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ಈ ಕುರಿತು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಕೂಡಲೇ ಎರಡು ದಿನಕ್ಕೆ ಒಂದು ಬಾರಿಯಂತೆ ನೀರು ಬಿಡುವ ವ್ಯವಸ್ಥೆ ಮಾಡಬೇಕು. ಅಲ್ಲದೆ, ಪುರಸಭೆ ಮತ್ತು ಕುಡಿಯುವ ನೀರು ಪೂರೈಸುವ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆ ಹರಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.
ಕೂಡಲೇ ನಮ್ಮ ವಾರ್ಡಗಳಿಗೆ ನೀರು ಪೂರೈಸುವ ಹಳೇ ಯಂತ್ರ ಬದಲಾಯಿಸಿ ಹೊಸ ಯಂತ್ರ ಅಳವಡಿಸಿ ನೀರು ಪೂರೈಸದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆಯ ನೀರು ಸರಬರಾಜು ಸಿಬ್ಬಂದಿ ಮಹಾಂತೇಶ ತಾರಿವಾಳ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು.
ಮುಖಂಡರಾದ ಮಹಾಂತೇಶ ಚಿತ್ತವಾಡಗಿ, ರಾಜೇಸಾಬ ಮಾನವಿ, ಶೇಖಪ್ಪ ಕರಂಡಿ, ಮಹಾಂತಪ್ಪ ಕುಂಬಾರ, ಹುಸೇನಸಾಬ ಒಂಟಿ, ಬಸವರಾಜ ಹಂಚಲಿ, ನಾಗಪ್ಪ ಕರಂಡಿ, ಬಾಬು ಇದ್ದಲಗಿ, ಸಬ್ಜೆಸಾಬ ಮಾನವಿ, ಅಮರೇಶ ಕರಂಡಿ, ಮಹೇಶ ಗಂಗೂರ ಮತ್ತಿತರರು ಇದ್ದರು.