ತೊಗರಿ ಬೆಳೆಗಾರರಿಗೆ ಪರಿಹಾರ ಕಲ್ಪಿಸಿ; ಶಾಸಕ ಯತ್ನಾಳ

Yatnal
Published on

ವಿಜಯಪುರ: ವಿಪರೀತ ಮಂಜಿನ ವಾತಾವರಣ ಹಾಗೂ ಕಳಪೆ ಬಿತ್ತನೆ ಬೀಜಗಳಿಂದ ತೀವ್ರ ನಷ್ಟ ಅನುಭವಿಸುತ್ತಿರುವ ತೊಗರಿ ಬೆಳೆಗಾರರಿಗೆ ಪರಿಹಾರ ಕಲ್ಪಿಸುವುದರ ಜೊತೆಗೆ ಕಳಪೆ ಬಿತ್ತನೆ ಬೀಜ ವಿತರಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕೃಷಿ ಸಚಿವ ಚಲುವರಾಯ ಸ್ವಾಮಿಗೆ ಪತ್ರ ಬರೆದಿದ್ದಾರೆ.

ರಾಜ್ಯ ಸರ್ಕಾರ ಕಳಪೆ ಗುಣಮಟ್ಟದ ತೊಗರಿ ಬೀಜ ವಿತರಣೆ ಮಾಡಿರುವುದರಿಂದ ತೊಗರಿ ಗಿಡದಲ್ಲಿ ಕಾಯಿಗಳೇ ಬಿಡದೆ, ನಮ್ಮ ವಿಜಯಪುರ ಭಾಗದ ರೈತರು ಕಂಗಾಲಾಗಿದ್ದಾರೆ. ರೈತರಿಗೆ ತೊಗರಿ ಬೀಜ ವಿತರಣೆ ಮಾಡುವ ಮುನ್ನ ಅದರ ಗುಣಮಟ್ಟ ಹಾಗೂ ಕಂಪನಿಯ ಪೂರ್ವಾಪರವನ್ನು ಪರಿಶೀಲಿಸಿ ನೀಡಬೇಕಾಗಿದ್ದ ಕೃಷಿ ಇಲಾಖೆಯ ಅಧಿಕಾರಿಗಳು, ಕೆಲವು ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಕಳಪೆ ಗುಣಮಟ್ಟದ ಬಿತ್ತನೆ ಬೀಜ ವಿತರಿಸಿದ್ದಾರೆಂದು ಯತ್ನಾಳ ಆರೋಪಿಸಿದ್ದಾರೆ.

ಸರ್ಕಾರ ರಿಯಾಯಿತಿ ದರದಲ್ಲಿ ವಿತರಿಸಿರುವ ಜಿಆರ್‌ಜಿ 152, 811 ತೊಗರಿ ಬೀಜಗಳು ಕಳಪೆ ಮಟ್ಟದಾಗಿದ್ದು, ಇದರಲ್ಲಿ ಕಾಯಿಗಳೇ ಹುಟ್ಟುತ್ತಿಲ್ಲ. ಜಿಲ್ಲೆಯೊಂದರಲ್ಲೇ ಸುಮಾರು 4.69 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಪ್ರತಿ ಗೊನೆಯಲ್ಲಿ 40 ರಿಂದ 50 ಕಾಯಿ ಇರಬೇಕಾದದ್ದು, ಕೇವಲ 2-3 ಕಾಯಿಗಳು ಮಾತ್ರ ಬಿಟ್ಟಿವೆ. ಪ್ರತಿ ಎಕರೆಗೆ 10-13 ಚೀಲ ಇಳುವರಿ ಬರುವ ಜಾಗದಲ್ಲಿ ಕೇವಲ 1-2 ಚೀಲ ಇಳುವರಿ ಬರುತ್ತಿರುವುದನ್ನು ನಿಮ್ಮ ಗಮನಕ್ಕೆ ತರಲಿಚ್ಛಿಸುತ್ತೇನೆಂದು ಯತ್ನಾಳ ಪತ್ರದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net