

ಸಿದ್ದಾಪುರ: ಪಟ್ಟಣದಲ್ಲಿ ನಡೆದ ರಸ್ತೆ ಅಗಲೀಕರಣದಲ್ಲಿ ಜಮೀನು ಕಳೆದುಕೊಂಡವರಿಗೆ ವರ್ಷಗಳೇ ಕಳೆದರೂ ಇನ್ನೂ ಪರಿಹಾರ ದೊರೆತಿಲ್ಲ. ಒಂದು ತಿಂಗಳಲ್ಲಿ ಪರಿಹಾರ ನೀಡದಿದ್ದರೆ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಆಸ್ತಿ ಕಳೆದುಕೊಂಡ ಸಂತ್ರಸ್ತರು ಆಗ್ರಹಿಸಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಪಂ ಸದಸ್ಯ ಹಾಗೂ ಸಂತ್ರಸ್ತ ಮಾರುತಿ ಟಿ.ನಾಯ್ಕ ಹೊಸೂರು, ಸಿದ್ದಾಪುರ ಪಪಂ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡುವುದಕ್ಕಾಗಿ ಸಾಕಷ್ಟು ಜನ ಮನೆ, ಅಂಗಡಿ, ಕಾಂಪೌಂಡ್, ಬಾವಿ, ಶೌಚಗೃಹ, ತೆಂಗಿನ ಮರಗಳು ಹಾಗೂ ಇತರೆ ಬೆಲೆ ಬಾಳುವ ಮರಗಳನ್ನು ಕಳೆದುಕೊಂಡಿದ್ದೇವೆ. ಆಸ್ತಿಯ ದಾಖಲೆ ಹೊಂದಿರುವ 62 ಕುಟುಂಬಗಳು ಜಮೀನುಗಳನ್ನು ಕಳೆದುಕೊಂಡಿದ್ದು, ಅದರ ಬಾಬ್ತು 2.75 ಕೋಟಿ ರೂ. ಪರಿಹಾರ ಬರಬೇಕಿದೆ. ಸರ್ಕಾರದ ಮಟ್ಟದಲ್ಲಿ ಏನು ಪರಿಹಾರ ಘೊಷಣೆ ಆಗಬೇಕಿತ್ತು ಅದರ ನಿಯಮಾವಳಿಯಂತೆ ಲೊಕೋಪಯೋಗಿ, ಎಸಿ, ಡಿಸಿ ಅವರು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಟ್ಟಿದ್ದಾರೆ.
ಈಗ ಸರ್ಕಾರದ ಮಟ್ಟದಲ್ಲಿ ಮಂಜೂರಿ ಆಗುವುದು ಬಾಕಿ ಇದೆ. ಸಾಕಷ್ಟು ಬಾರಿ ಜಾಗವನ್ನು ಕಳೆದುಕೊಂಡ ಸಂತ್ರಸ್ತರು ಶಾಸಕ ಭೀಮಣ್ಣ ನಾಯ್ಕ ಅವರ ಗಮನಕ್ಕೆ ತಂದಿದ್ದಾರೆ. ಅವರು ಪ್ರಯತ್ನ ಮಾಡುತ್ತೇವೆ ಆಗುತ್ತದೆ ಎಂದು ಹೇಳುತ್ತ ಬಂದಿದ್ದಾರೆ. ಆದರೆ, ಪರಿಹಾರದ ಹಣ ನಮಗೆ ಇನ್ನೂವರೆಗೂ ಮಂಜೂರಿ ಆಗಿಲ್ಲ. ಹಾಗಾಗಿ ಶಾಸಕರು ಶೀಘ್ರ ನಮಗೆ ಪರಿಹಾರ ಒದಗಿಸಿಕೊಡಬೇಕು. ಇನ್ನು ಒಂದು ತಿಂಗಳಲ್ಲಿ ಪರಿಹಾರ ನೀಡದಿದ್ದರೆ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದರು.
ಸಾಮಾಜಿಕ ಕಾರ್ಯಕರ್ತ ಅಣ್ಣಪ್ಪ ನಾಯ್ಕ ಮಾತನಾಡಿ, ರಸ್ತೆ ಅಗಲೀಕರಣಕ್ಕಾಗಿ ಸರ್ಕಾರದಿಂದ ನೋಟಿಸ್ ಬಂದ ತಕ್ಷಣ ಅದಕ್ಕೆ ಸ್ಪಂದಿಸಿ ಇಲ್ಲಿಯ ಜನತೆ ತಮ್ಮ ಜಮೀನನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ, ಸರ್ಕಾರ ಪರಿಹಾರ ನೀಡಿಲ್ಲ. ಕೂಡಲೇ ಜಮೀನು ಬಿಟು ್ಟೊಟ್ಟವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಮೈಕೋ ರೋಡ್ರಿಗಸ್, ರಿಜ್ವಾನ್ ಶೇಖ್, ವಿನಾಯಕ ತಿಮ್ಮಪ್ಪ ಬಿ., ಚಂದ್ರಕಾಂತ ಪೈ, ರಾಮು ಪೈ, ನೇತ್ರಾವತಿ ಬಾಂದಿ, ಲಲಿತಾ ಅಂಬಿಗ, ದಿವ್ಯ ರೋಡ್ರಿಗಸ್, ಜ್ಯೂಲಿ, ಶಿವಕುಮಾರ ಪುಟ್ಟಯ್ಯ ಪೂಜಾರಿ, ಮನೋಹರ, ಜೈರಾಮ ಈರಾ ನಾಯ್ಕ, ಸಂತೋಷ ಪೈ, ಮಂಜುನಾಥ ಆರ್.ಭಟ್ಟ ಇತರರಿದ್ದರು.