ಸಾವಿಗೀಡಾದ ಬಾಲಕಿಯ ಪಾಲಕರಿಗೆ ಪರಿಹಾರ ನೀಡಿ

4 mlv 2
ಮಿಮ್ಸ್‌ನಲ್ಲಿ ಸಾವಿಗೀಡಾದ ಮಳವಳ್ಳಿ ತಾಲೂಕಿನ ನೆಲ್ಲೂರು ಗ್ರಾಮದ ಬಾಲಕಿ ಸಾನ್ವಿ ಮನೆಗೆ ಬುಧವಾರ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಹನುಮಂತು, ಮುಖಂಡರಾದ ಅಣ್ಣೂರು ನವೀನ್, ಮಹದೇವಮ್ಮ, ನಂಜುಂಡೇಗೌಡ, ವಿರೇಗೌಡ, ಶಿವಮಾದೇಗೌಡ, ಭದ್ರೇಗೌಡ, ಜವರೇಗೌಡ ಇದ್ದರು.
Published on

ಮಳವಳ್ಳಿ: ಮಿಮ್ಸ್‌ನಲ್ಲಿ ವೈದ್ಯರ ನಿರ್ಲಕ್ಷೃದಿಂದ ಬಾಲಕಿಯ ಸಾವು ಸಂಭವಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಸಮಗ್ರ ತನಿಖೆ ನಡೆಸಿ ವೈದ್ಯಾಧಿಕಾರಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದರ ಜತೆಗೆ ಸಂತ್ರಸ್ತೆಯ ಪಾಲಕರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಬೇಕೆಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆಗ್ರಹಿಸಿದರು.

ತಾಲೂಕಿನ ನೆಲ್ಲೂರು ಗ್ರಾಮದ ಮೃತಪಟ್ಟ ಬಾಲಕಿ ಸಾನ್ವಿ ಮನೆಗೆ ಬುಧವಾರ ಭೇಟಿ ನೀಡಿ ಕುಟುಂಬದವರಿಗೆ ವೈಯಕ್ತಿಕ ಪರಿಹಾರ ನೀಡಿ ಸಾಂತ್ವನ ಹೇಳಿದರು. ಕಾಲಿಗೆ ಪೆಟ್ಟಾಗಿದ್ದ ಹಿನ್ನೆಲೆಯಲ್ಲಿ ಬಾಲಕಿ ಸಾನ್ವಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಮಕ್ಕಳ ವೈದ್ಯರ ನಿರ್ಲಕ್ಷತನದಿಂದ ಬಾಲಕಿಯ ಸಾವು ಸಂಭವಿಸಿತು ಎಂದು ಪಾಲಕರು ತಿಳಿಸಿದ್ದಾರೆ. ಅರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ಪಾಲಕರಿಗೆ ನ್ಯಾಯ ದೊರಕಿಸಿಕೊಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಜತೆಗೆ ದೂರವಾಣಿಯಲ್ಲಿ ಮಾತನಾಡಿ ಒತ್ತಾಯಿಸಿದ್ದೇನೆ ಎಂದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಈಗಾಗಲೇ ಮಾಹಿತಿ ನೀಡಲಾಗಿದ್ದು, ಅವರು ಕೂಡ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥ ವೈದ್ಯರ ಮೇಲೆ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಧೈರ್ಯ ತುಂಬುವುದು ಮಾನವೀಯ ಧರ್ಮ. ಜಿಲ್ಲೆಯ ಸಂಸದರೂ ಆಗಿರುವ ಕುಮಾರಣ್ಣ ದೆಹಲಿಯಿಂದ ರಾಜ್ಯಕ್ಕೆ ಬಂದ ಕೂಡಲೇ ಮಗು ಕಳೆದುಕೊಂಡಿರುವ ಸಂತ್ರಸ್ತ ಪಾಲಕರ ಜತೆಗೆ ಮಾತನಾಡಿಸಿ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಗ್ರಾಮದ ಮುಖಂಡರು ಹಾಗೂ ಬಾಲಕಿ ಕುಟುಂಬದವರು ನ್ಯಾಯ ಕೊಡಿಸಲು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಬರೆದ ಮನವಿ ಪತ್ರವನ್ನು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅವರಿಗೆ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹನುಮಂತು, ಮುಖಂಡರಾದ ಅಣ್ಣೂರು ನವೀನ್, ಮಹದೇವಮ್ಮ, ನಂಜುಂಡೇಗೌಡ, ವೀರೇಗೌಡ, ಶಿವಮಾದೇಗೌಡ, ಭದ್ರೇಗೌಡ, ಜವರೇಗೌಡ, ಕುಳ್ಳಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net