

ಸಿಂಧನೂರು: ಸಿಂಧನೂರು-ಮಸ್ಕಿ ತಾಲೂಕಿನಲ್ಲಿ ಮಳೆಯಿಂದ ವಿವಿಧ ಬೆಳೆಗಳು ಹಾನಿಗೀಡಾಗಿದ್ದು ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿ ಸಿಪಿಐ(ಎಂಎಲ್) ಲಿಬರೇಷನ್ ತಾಲೂಕು ಸಮಿತಿ ಸೋಮವಾರ ತಹಸಿಲ್ ಕಚೇರಿಯ ಶಿರಸ್ತೇದಾರ್ ಚಂದ್ರಶೇಖರಗೆ ಮನವಿ ಸಲ್ಲಿಸಿತು.
ತಾಲೂಕು ವ್ಯಾಪ್ತಿಯ ಉದ್ಬಾಳ ಜೆ., ಗೋಮರ್ಸಿ, ಜೋಳದರಾಶಿ, ಮಾಡಸಿರವಾರ, ಬೆಳಗುರ್ಕಿ, ಕಾತರಕಿ ಡಿ., ಮಲದಿನ್ನಿ ಡಿ., ಗೊಣ್ಣಿಗನೂರು, ಅಲಬನೂರು, ಹರಟೇನೂರು, ಬಾದರ್ಲಿ, ವಳಬಳ್ಳಾರಿ, ಗಿಣಿವಾರ, ಗೋನವಾರ, ರಾಮತ್ನಾಳ, ಕಗ್ಗಲ್.ಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರು ಸಾವಿರಾರು ಎಕರೆಯಲ್ಲಿ ಹೈಬ್ರಿಡ್ ಜೋಳ ಬಿತ್ತನೆ ಮಾಡಿದ್ದಾರೆ. ಆದರೆ, ಜಮೀನುಗಳಲ್ಲಿ ಮಳೆ ನೀರು ನಿಂತಿದ್ದು, ಕೊಳೆಯುವ ಹಂತ ತಲುಪಿವೆ.
ಕೆಲ ಜೋಳದ ಹೊಲಗಳು ಭತ್ತದ ಗದ್ದೆಗಳಂತಾಗಿವೆ. ವಿಪರೀತ ಮಳೆಯಿಂದ ಸಿಂಧನೂರು, ಮಸ್ಕಿ ತಾಲೂಕು ವ್ಯಾಪ್ತಿಯಲ್ಲಿ ಅಪಾರ ಬೆಳೆನಷ್ಟವಾಗಿದ್ದು, ಕೂಡಲೇ ಕಂದಾಯ, ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿ ಜೋಳ ಎಕರೆಗೆ 25 ಸಾವಿರ ಹಾಗೂ ತೊಗರಿಗೆ 20 ಸಾವಿರ ರೂ. ಪರಿಹಾರ ರೈತರ ಖಾತೆಗೆ ಜಮಾ ಮಾಡಬೇಕು.
ನಷ್ಟಕ್ಕೀಡಾದ ಹತ್ತಿ ಬೆಳೆಗಾರರಿಗೆ ಎಕರೆಗೆ 15 ಸಾವಿರ ರೂ. ಪರಿಹಾರ ಒದಗಿಸಬೇಕು. ಜೋಳ, ತೊಗರಿ, ಸಜ್ಜೆ, ಹತ್ತಿ ಹಾಗೂ ತೋಟಗಾರಿಕೆ ಬೆಳೆ ಹಾನಿ ಸಮೀಕ್ಷೆಯನ್ನೂ ಕಡ್ಡಾಯವಾಗಿ ನಡೆಸಬೇಕು. ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಈ ಕೂಡಲೇ ಆದೇಶ ಹೊರಡಿಸಿ ಸಮೀಕ್ಷೆ ಚುರುಕೊಳಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ಭಗತ್‌ಸಿಂಗ್ ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ, ಪ್ರಮುಖರಾದ ಆರ್.ಎಚ್.ಕಲ್ಮಂಗಿ, ಮಹಾದೇವ ಅಮರಾಪುರ, ರೈತರಾದ ಚಿದಾನಂದ, ಹುಸೇನಪ್ಪ, ಮೌನೇಶ, ದುರುಗಪ್ಪ, ಶರಣಪ್ಪ, ವೀರೇಶ, ರಮೇಶ, ಕಂಠೆಪ್ಪ ಇದ್ದರು.