

ಯಳಂದೂರು: ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ 2025-26ನೇ ಸಾಲಿನ ನರೇಗಾ ಯೋಜನೆಯ ಕ್ರಿಯಾ ಯೋಜನೆ ತಯಾರಿಸುವ ಸಂಬಂಧ ಗ್ರಾಮ ಸಭೆ ನಡೆಯಿತು.
ಮಾಂಬಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲೇಶ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ನರೇಗಾ ಯೋಜನೆಯ ಬಗ್ಗೆ ಚರ್ಚಿಸಿ 1.74 ಕೋಟಿ ರೂ. ವೆಚ್ಚದಲ್ಲಿ ತಯಾರಿಸಿರುವ ವಿವಿಧ ಕಾಮಗಾರಿಗಳಿಗೆ ಅನುಮೋದನೆ ನೀಡಲಾಯಿತು.
ನಂತರ ಗ್ರಾಮದ ಸಾರ್ವಜನಿಕರು ಗ್ರಾಮದಲ್ಲಿ ಚರಂಡಿ ಹೂಳು ತೆಗೆಸಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಜಲಜೀವನ್ ಯೋಜನೆಯಡಿ ಅಳವಡಿಸಿರುವ ಪೈಪ್‌ಲೈನ್ ಕಾಮಗಾರಿ ಕಳಪೆಯಾಗಿದ್ದು ಗ್ರಾಮದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರಿಲ್ಲದೆ ಅಶುದ್ಧ ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ನಿವಾಸಿಗಳಿಗೆ ಶುದ್ಧ ನೀರು ಪೂರೈಕೆ ಮಾಡುವಂತೆ ಹಾಗೂ ಕಾವೇರಿ ಕುಡಿಯುವ ನೀರನ್ನು ನೀಡುವಂತೆ, ಅಂಗವಿಕಲರಿಗೆ ವಿಶೇಷ ಅನುದಾನ ಅರ್ಹ ಫಲಾನುಭವಿಗಳಿಗೆ ನೀಡುವಂತೆ ಆಗ್ರಹಿಸಿದರು.
ಗ್ರಾಮದಲ್ಲಿ 2.20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅಂಬೇಡ್ಕರ್ ಸಮುದಾಯ ಭವನದ ಗುತ್ತಿಗೆದಾರರು ಬಿಲ್ ಪಾವತಿ ಆಗಿಲ್ಲ ಎಂದು ಸಮುದಾಯ ಭವನವನ್ನು ಸಮಾಜ ಕಲ್ಯಾಣ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗೆ ವಹಿಸದೆ ಬೀಗ ಹಾಕಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತಿಲ್ಲ. ಅಂಬೇಡ್ಕರ್ ಸಮುದಾಯ ಭವನವನ್ನು ಸಮಾಜ ಕಲ್ಯಾಣ ಇಲಾಖೆಯಾಗಲಿ ಅಥವಾ ಗ್ರಾಮ ಪಂಚಾಯಿತಿಯಾಗಲಿ ಸ್ವಾಧೀನಕ್ಕೆ ಪಡೆದು ಸಾರ್ವಜನಿಕರ ಶುಭಕಾರ್ಯ ಶೈಕ್ಷಣಿಕ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲು ಅನುಕೂಲ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಪಿಡಿಒ ಉಷಾರಾಣಿ, ದ್ವಿತೀಯ ದರ್ಜೆ ಸಹಾಯಕ ನಾಗೇಶ್, ಸದಸ್ಯರಾದ ಇಂದ್ರಮ್ಮ, ವರದರಾಜು, ಲಕ್ಷ್ಮೀಪತಿ, ದೇವರಾಜು, ಲಕ್ಷ್ಮೀ ರಾಮು, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮದ ಮುಖಂಡರಾದ ಮಾಂಬಳ್ಳಿ ರಾಮು, ಲೋಕೇಶ್, ರಮೇಶ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.