

ರಟ್ಟಿಹಳ್ಳಿ: ತಾಲೂಕಿನಲ್ಲಿ ಶಿಥಿಲಾವಸ್ಥೆಗೆ ತಲುಪಿರುವ ಕಟ್ಟಡಗಳನ್ನು ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಯಾವುದೇ ಅವಘಡಗಳ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸರ್ಕಾರಿ ಶಾಲೆಗಳಿಗೆ ಶುದ್ಧ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ವಸಂತಕುಮಾರ ಬಿ. ಸೂಚನೆ ನೀಡಿದರು.
ಪಟ್ಟಣದ ತಾಪಂನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಣ ಸಂಯೋಜನಕ ಎನ್.ವಿ. ನಾಯಕ ಮಾತನಾಡಿ, ಈಗಾಗಲೇ ಪ್ರೌಢ ಶಾಲೆಯ ಹೆಣ್ಣು ಮಕ್ಕಳಿಗೆ ಸಮವಸ್ತ್ರ ಮತ್ತು ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಣೆ ಮಾಡಲಾಗಿದೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಲು ಹಾಗೂ ಹೊಸ ಕಟ್ಟಡಗಳ ನಿರ್ಮಾಣ ಕುರಿತು ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ ಎಂದು ತಿಳಿಸಿದರು.
ತಾ.ಪಂ.ಇಒ ಶಶಿಧರ ಎಚ್. ಮಾತನಾಡಿ, ಶಾಲಾ ಮಕ್ಕಳಿಗೆ ಕುಡಿಯಲು ಬೋರ್ವೆಲ್ ನೀರನ್ನು ನೀಡಬೇಡಿ. ಎಲ್ಲ ಶಾಲೆಯ ಮಕ್ಕಳಿಗೂ ಶುದ್ಧ ಶುದ್ದ ನೀರನ್ನು ಪೂರೈಕೆ ಮಾಡಬೇಕು ಈ ಬಗ್ಗೆ ಸಭೆಯನ್ನು ಆಯೋಜಿಸಿ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ತಾಲೂಕಿನ ಕುಡುಪಲಿ ಗ್ರಾಮದಲ್ಲಿ ಗಂಡು ಮಕ್ಕಳ ಶಾಲೆಯ ಎಲ್ಲ ಕೊಠಡಿಗಳು ನೆಲಸಮವಾಗಿದೆ. ಪ್ರಸ್ತುತ ಶಾಲೆಯ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ, ಈ ಬಗ್ಗೆ ಶೀಘ್ರವೇ ಕೊಠಡಿಗಳ ನಿರ್ವಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕುಡುಪಲಿ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಕರಿಯಪ್ಪ ಚೌಡಕ್ಕನವರ ಮನವಿ ಮಾಡಿದರು. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ರಸ್ತೆಗಳು ನಿರ್ವಣವಾದ ಬಳಿಕ ರೈತರು ತಮ್ಮ ಜಮೀನುಗಳಿಗೆ ಪೈಪ್ಲೈನ್ ಹಾಕಲು ರಸ್ತೆಯನ್ನು ಕಡಿದು ಹಾಗೆಯೇ ಬಿಡುತ್ತಾರೆ. ಇದರಿಂದ ಅಪಘಾತಗಳು ಸಂಭವಿಸುತ್ತವೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು. ಜೆ.ಜೆ.ಎಂ. ಕಾಮಗಾರಿಯಲ್ಲಿ ರಸ್ತೆಯ ಬದಿಯಲ್ಲಿ ಗುಂಡಿಗಳನ್ನು ತೆಗೆದು ಹಾಗೆಯೇ ಬಿಡದಂತೆ ಮುನ್ನಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.
ತಾಲೂಕು ವೈದ್ಯಾಧಿಕಾರಿ ಜೆಡ್.ಆರ್. ಮಕನದಾರ ಮಾತನಾಡಿ, ಮುಂಗಾರು ಆಗಮನದ ಮುನ್ನ್ನೆಚ್ಚರಿಕೆಯಿಂದ ಡೆಂಘೆ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ಕುರಿತು ಮನೆಮನೆಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ತಾ.ಪಂ. ಆಡಳಿತಾಧಿಕಾರಿ ವಸಂತಕುಮಾರ ಮಾತನಾಡಿ, ತಾಲೂಕಿನ ಜನರು ಸರ್ಕಾರಿ ಆಸ್ಪತ್ರೆಗಳನ್ನು ಹೆಚ್ಚಾಗಿ ಅವಲಂಬಿಸಿರುತ್ತಾಋಎ. ಆದ್ದರಿಂದ ವೈದ್ಯರು ಮತ್ತು ಸಿಬ್ಬಂದಿ ರೋಗಿಗಳ ಸಂಪೂರ್ಣ ಚಿಕಿತ್ಸೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸೂಚನೆ ನೀಡಿದರು.
ಹೆಸ್ಕಾಂ ಅಧಿಕಾರಿ ರಾಜೀವ್ ಮರಿಗೌಡ್ರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಎಚ್.ಮಾರತೆಪ್ಪ, ಜಿಲ್ಲಾ ಪಂಚಾಯಿತಿ ವಿಭಾಗದ ಕಿರಿಯ ಇಂಜಿನಿಯರ್ ನವೀನಕುಮಾರ, ಪವನಕುಮಾರ, ಚಂದ್ರಶೇಖರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ವರದಿ ಮಂಡಿಸಿದರು. ಸಹಾಯಕ ಲೆಕ್ಕಾಧಿಕಾರಿ ಎಫ್.ಎನ್. ಮಕನದಾರ, ತಾ.ಪಂ. ಸಿಬ್ಬಂದಿ ಉಪಸ್ಥಿತರಿದ್ದರು.
ಸಿ.ಡಿ.ಪಿ.ಒ. ಶಂಭಲಿಂಗ ಹಿರೇಮಠ ಮಾತನಾಡಿ, ತಾಲೂಕಿನಲ್ಲಿ 121 ಸ್ವಂತ ಅಂಗನವಾಡಿ ಕಟ್ಟಡಗಳಿವೆ. 39 ಅಂಗನವಾಡಿಗಳೂ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿವೆ. 78 ಅಂಗನವಾಡಿ ಕೇಂದ್ರಗಳಿಗೆ ಕಾಂಪೌಂಡ ವ್ಯವಸ್ಥೆ ಇಲ್ಲ. ನರೇಗಾ ಯೋಜನೆಯಡಿ ಕಾಂಪೌಂಡ್ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.