

ಶೃಂಗೇರಿ: ತಾಲೂಕಿನ ಗ್ರಾಮೀಣ ಭಾಗಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸುವಂತೆ ಜೆಡಿಎಸ್ ಘಟಕದ ಅಧ್ಯಕ್ಷ ಭರತ್ ಗಿಣಕಲ್ ಒತ್ತಾಯಿಸಿದರು.
ಗ್ರಾಮೀಣ ಭಾಗಗಳಿಗೆ ಬಸ್ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ತಾಲೂಕು ಜೆಡಿಎಸ್ ಘಟಕದ ಪದಾಧಿಕಾರಿಗಳು ಮಂಗಳವಾರ ಶಿರಸ್ತೇದಾರ್ ಮೇರಿದೀಪಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿ, ತಾಲೂಕಿನಲ್ಲಿ ಹೆಚ್ಚಾಗಿ ಕೂಲಿಕಾರ್ಮಿಕರು, ಕುಶಲಕರ್ಮಿಗಳು, ಸಣ್ಣ ರೈತರು ವಾಸವಾಗಿದ್ದಾರೆ. ದೂರದಿಂದ ಪಟ್ಟಣಕ್ಕೆ ಬರಲು ಎಲ್ಲರೂ ಸ್ವಂತ ವಾಹನ ಹೊಂದಿಲ್ಲ. ಜತೆಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಸಮಸ್ಯೆಯಾಗಲಿದೆ. ಆದ್ದರಿಂದ ಕೆಎಸ್‌ಆರ್‌ಟಿಸಿ ಬಸ್ ಸೇವೆ ಒದಗಿಸಬೇಕು ಎಂದು ಮನವಿ ಮಾಡಿದರು.
ಮುಖಂಡ ಜಿ.ಜಿ.ಮಂಜುನಾಥ್ ಮಾತನಾಡಿ, ತಾಲೂಕಿನ ಕೆಲವು ಗ್ರಾಮಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಜೀವನ ನಿರ್ವಹಣೆಗಾಗಿ ಕೂಲಿಕಾರ್ಮಿಕರು ಪಟ್ಟಣಕ್ಕೆ ಬರಲು ಬಸ್ ಸೌಲಭ್ಯವಿಲ್ಲ. ಆಸ್ಪತ್ರೆ ಹಾಗೂ ಕಚೇರಿಗೆ ಬರಲು ಒಂದು ವರ್ಷದ ಹಿಂದೆ ಹಳ್ಳಿಗಳಿಗೆ ಸಮರ್ಪಕವಾಗಿ ಬಸ್ ಸೌಲಭ್ಯವಿತ್ತು. ಆದರೆ ಈಗ ಸ್ಥಗಿತಗೊಂಡಿದೆ. ತುರ್ತು ಕೆಲಸಕ್ಕಾಗಿ ಆಟೋದಲ್ಲಿ ಬರುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಆರ್ಥಿಕವಾಗಿ ಹಿಂದುಳಿದವರ ಗೋಳನ್ನು ಯಾರೂ ಕೇಳದಂತಾಗಿದೆ. ಮೇಲಧಿಕಾರಿಗಳು ಗಮನಹರಿಸಿ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಮುಖಂಡರಾದ ನಾಗೇಶ್ ನಾಯ್ಕ, ಚಂದ್ರಪ್ಪ, ಮಲ್ಲೇಶ್, ಶಂಕರಾನಂದ, ವೆಂಕಪ್ಪ ಆಚಾರ್ಯ ಇದ್ದರು.