ಬೆಳ್ಳೂಡಿಗೆ ಬಸ್ ಸೌಲಭ್ಯ ಕಲ್ಪಿಸಿ

Hrr6Manave1
Published on

ಹರಿಹರ: ಶಾಲೆ, ಕಾಲೇಜುಗಳಿಗೆ ತೆರಳಲು ಅನುಕೂಲವಾಗುವಂತೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಬೆಳ್ಳೂಡಿ ಗ್ರಾಮದ ವಿದ್ಯಾರ್ಥಿಗಳು ಜಯಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕರಿಗೆ ಬುಧವಾರ ಮನವಿ ಸಲ್ಲಿಸಿದರು.

ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಎಸ್.ಗೋವಿಂದ ಮಾತನಾಡಿ, ಹರಿಹರದ ವಿವಿಧ ಶಾಲಾ, ಕಾಲೇಜುಗಳಿಗೆ ಗ್ರಾಮದಿಂದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯ ಓಡಾಡುತ್ತಾರೆ. ಸಮಯಕ್ಕೆ ಸರಿಯಾಗಿ ಬಸ್ ಇಲ್ಲದ್ದರಿಂದ ಅನಿವಾರ್ಯವಾಗಿ ವಿದ್ಯಾರ್ಥಿಗಳು ಆಟೋ ಮತ್ತಿತರ ವಾಹನಗಳಲ್ಲಿ ಸಂಚರಿಸುವ ದುಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಸ್ ಇಲ್ಲದ್ದರಿಂದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ, ಕಾಲೇಜುಗಳಿಗೆ ತಲುಪಲಾರದೆ ಶೈಕ್ಷಣಿಕವಾಗಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಬೆಳಗ್ಗೆ 9.10ಕ್ಕೆ ಬೆಳ್ಳೂಡಿಯಿಂದ ಹರಿಹರಕ್ಕೆ ಬಸ್ ಸೌಲಭ್ಯ ಒದಗಿಸಬೇಕು. ತಾಲೂಕಿನ ಹಲವು ಗ್ರಾಮಗಳಲ್ಲಿಯೂ ಈ ಸಮಸ್ಯೆ ಇದೆ. ಬಸ್ ಪಾಸ್ ಹೊಂದಿರುವ ವಿದ್ಯಾರ್ಥಿಗಳಿಗೆ ಸೌಲಭ್ಯ ಒದಗಿಸುವುದು ಸಾರಿಗೆ ಸಂಸ್ಥೆಯ ಜವಾಬ್ದಾರಿಯಾಗಿದೆ.

ಶನಿವಾರದಿಂದ ಬೆಳ್ಳೂಡಿ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಒದಗಿಸದಿದ್ದರೆ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಡಿಪೋ ಅಧಿಕಾರಿ ಪರಿಶೀಲನೆ ಮಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಸಂಘಟನೆ ಉಪಾಧ್ಯಕ್ಷ ಎಂ.ಆರ್.ಆನಂದ್, ಪ್ರಧಾನ ಕಾರ್ಯದರ್ಶಿ ಸಿ.ಎಚ್ ಸುನಿಲ್ ಕುಮಾರ್. ಖಜಾಂಚಿ ಶಬರೀಶ್ ಮತ್ತು ವಿದ್ಯಾರ್ಥಿ ಘಟಕದ ಅಧ್ಯಕ್ಷ ಶ್ರೀನಿವಾಸ್, ಕಾರ್ತಿಕ್, ಸುದೀಪ್, ರಾಜು, ಮಹಾರುದ್ರ, ಹರೀಶ್, ಎಂ.ಎಂ.ಚೈತ್ರ, ಮೇಘನ, ನಯನ, ನಂದಿನಿ, ಜ್ಯೋತಿ, ಕೆ.ಪಿ.ಪಲ್ಲವಿ, ಕವಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net