

ಶಿರಸಿ: ಶಿರಸಿ- ಕುಮಟಾ ರಾಷ್ಟ್ರೀಯ ಹೆದ್ದಾರಿ 766ಇ ಡಿ. 2ರಿಂದ ಸಂಚಾರ ಸ್ಥಗಿತಗೊಳ್ಳಲಿರುವ ಹಿನ್ನೆಲೆಯಲ್ಲಿ ಅಂಕೋಲಾ, ಕಾರವಾರಕ್ಕೆ ತೆರಳಲು ದೇವನಳ್ಳಿ, ವಡ್ಡಿ ಘಟ್ಟದ ಮೂಲಕ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಅವರಿಗೆ ಮತ್ತಿಘಟ್ಟ ಭಾಗದ ನಾಗರಿಕರು ಶನಿವಾರ ಆಗ್ರಹಿಸಿದರು.
ಶಿರಸಿ- ಕುಮಟಾ ರಸ್ತೆಗೆ ಬದಲಿ ಮಾರ್ಗವಾಗಿ ಶಿರಸಿ- ಸಿದ್ದಾಪುರ- ಕುಮಟಾ, ಶಿರಸಿ- ಯಲ್ಲಾಪುರ- ಕಾರವಾರವನ್ನೂ ಸೂಚಿಸಲಾಗಿದೆ. ಆದರೆ, ಶಿರಸಿ, ಯಲ್ಲಾಪುರ, ಕಾರವಾರ ರಸ್ತೆಯು ಸುಮಾರು 160 ಕಿ.ಮೀ.ನಷ್ಟು ದೀರ್ಘವಾಗಿದೆ. ಇದಕ್ಕೆ ಬದಲಾಗಿ ಶಿರಸಿ, ದೇವನಳ್ಳಿ, ವಡ್ಡಿ, ಹೊಸಕಂಬಿ, ಅಗಸೂರ ಮಾರ್ಗವಾಗಿ ಅಂಕೋಲಾ, ಯಾಣ, ಕಾರವಾರಕ್ಕೆ ಪ್ರಯಾಣ ಮಾಡಿದರೆ ಸುಮಾರು 50 ಕಿ.ಮೀಯಷ್ಟು ದೂರ ಕಡಿಮೆಯಾಗುತ್ತದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ. ಈಗಾಗಲೇ ಈ ರಾಜ್ಯ ಹೆದ್ದಾರಿ 143ರಲ್ಲಿ ಶಿರಸಿ- ಗೋಕರ್ಣ ಬಸ್ ಸಂಚಾರ ಮಾಡಲಾಗಿದೆ.
ಶಿರಸಿ, ದೇವನಳ್ಳಿ, ವಡ್ಡಿ, ಹೊಸಕಂಬಿ ಅಗಸೂರ ಮಾರ್ಗವಾಗಿ ಅಂಕೋಲಾ, ಕಾರವಾರಕ್ಕೆ ಕೆಲವು ಬಸ್ಗಳನ್ನಾದರೂ ಬಿಟ್ಟರೆ ಪ್ರಯಾಣಿಕರಿಗೆ ಅನುಕೂಲ ಆಗಲಿದೆ ಎಂದು ವಿವರಿಸಲಾಗಿದೆ. ಇದೇ ವೇಳೆ ಶಾಸಕ ಭೀಮಣ್ಣ ನಾಯ್ಕ ಅವರಲ್ಲಿ ತಾಳಗುಪ್ಪ ರೈಲ್ವೆ ಸ್ಟೇಷನ್ಗೆ ವಿಶೇಷ ಬಸ್ ಬಿಡುವಂತೆ ಒತ್ತಾಯ ಕೇಳಿ ಬಂತು.
ಶಿರಸಿಯಿಂದ ತಾಳಗುಪ್ಪ ರೈಲ್ವೆ ಸಮಯಕ್ಕೆ ಹೋಗಲು ಹಾಗೂ ಮರುದಿನ ರೈಲು ಬಂದ ಬಳಿಕ ಶಿರಸಿ ತನಕ ತೆರಳಲು ಬಸ್ ಸೌಲಭ್ಯ ಬೇಕಾಗಿದೆ ಎಂದರು. ಇದಕ್ಕೆ ಸ್ಪಂದಿಸಿದ ಭೀಮಣ್ಣ, ಈವೆರಡೂ ಮಾರ್ಗ ಸೌಲಭ್ಯ ಅಗತ್ಯವಿದ್ದು, ಈ ಕುರಿತು ಸಾರಿಗೆ ಡಿಸಿ ಅವರ ಜತೆ ಮಾತನಾಡುವ ಭರವಸೆ ನೀಡಿದರು. ಮನವಿ ಸಲ್ಲಿಸುವ ವೇಳೆ ಜಿ.ಎಂ. ಶೆಟ್ಟಿ ಚನ್ನಗಾರ, ರಮಾನಂದ ನಾಯ್ಕ ಅಚವೆ, ಎನ್.ವಿ. ವೈದ್ಯ ಮತ್ತಿಘಟ್ಟ, ವಿ.ಆರ್. ಹೆಗಡೆ, ಇತರರಿದ್ದರು.