ಚಿಕ್ಕಮಗಳೂರು -ಎನ್.ಆರ್.ಪುರಕ್ಕೆ ಬಸ್ ಸೌಲಭ್ಯಕಲ್ಪಿಸಿ

nrp 5 A
Published on

ಎನ್.ಆರ್.ಪುರ: ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಿಂದ ಎನ್.ಆರ್.ಪುರಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬಿಡಬೇಕು ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.

ತಾಪಂ ಸಾಮರ್ಥ್ಯಸೌಧದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಒತ್ತಾಯಿಸಿದ ಸದಸ್ಯರು, ಚಿಕ್ಕಮಗಳೂರು -ಎನ್.ಆರ್.ಪುರ ನಡುವೆ ಬಸ್ ಸಂಚಾರ ವಿರಳವಾಗಿದೆ. ಸರ್ಕಾರಿ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರಕ್ಕೆ ಸಂಚರಿಸುವವರಿಗೆ ಸರಿಯಾದ ಬಸ್ ಸೌಕರ್ಯವಿಲ್ಲ. ಆದ್ದರಿಂದ ಎನ್.ಆರ್.ಪುರ-ಚಿಕ್ಕಮಗಳೂರು ನಡುವೆ ಹೆಚ್ಚು ಬಸ್‌ಗಳನ್ನು ಬಿಡಬೇಕು ಎಂದು ಕೆಎಸ್‌ಆರ್‌ಟಿ ಬಸ್ ಡಿಪೋ ಅಧಿಕಾರಿಗಳಿಗೆ ಒತ್ತಾಯಿಸಿದರು.

ಚಿಕ್ಕಮಗಳೂರು ಡಿಪೋ ನಿಲ್ದಾಣಾಧಿಕಾರಿ ಬಿ.ಸುರೇಶ್‌ನಾಯ್ಕ ಮಾತನಾಡಿ, ಚಿಕ್ಕಮಗಳೂರು -ಎನ್.ಆರ್.ಪುರ ನಡುವೆ ಬಸ್ ಸಂಚಾರಕ್ಕೆ ಈಗಾಗಲೇ ನಮ್ಮಲ್ಲಿ ಹಳೇ ಪರವಾನಗಿ ಇದೆ. ಸಮಿತಿ ಸಭೆಯಲ್ಲಿ ನಿರ್ಣಯಿಸಿದಂತೆ ಬಸ್ ಸಂಚರಿಸಲು ಪತ್ರಬರೆದು ಅದರೊಂದಿಗೆ ಶಾಸಕರ ಶಿಫಾರಸ್ಸಿನ ಪತ್ರ ನೀಡಿದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಬಸ್ ಸಂಚಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.

ಶೃಂಗೇರಿಯಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಕಾಮಗಾರಿ ಪ್ರಗತಿಯಲ್ಲಿದೆ. ಅಧಿಕ ಮಳೆಯಿಂದ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಮಳೆಗಾಲದ ನಂತರ ಕಾಮಗಾರಿ ಆರಂಭವಾಗಲಿದ್ದು, ಮಾರ್ಚ್ ಅಂತ್ಯದೊಳಗೆ ಡಿಪೋ ನಿರ್ಮಾಣ ಸಂಪೂರ್ಣವಾಗಿ 50 ಸರ್ಕಾರಿ ಬಸ್‌ಗಳು ಸಂಚರಿಸಲಿವೆ. ಜೂನ್‌ನಲ್ಲಿ ಚಿಕ್ಕಮಗಳೂರು, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಭಾಗದಲ್ಲಿ ಸುಮಾರು 9,68,335 ಜನ ಬಸ್‌ನಲ್ಲಿ ಸಂಚರಿಸಿದ್ದಾರೆ. ಜೂನ್ ತಿಂಗಳಲ್ಲಿ ಮಹಿಳಾ ಪ್ರಯಾಣಿಕರಿಂದ 3,65,69,025 ರೂ. ಆದಾಯ ಲಭಿಸಿದೆ. ಕಳೆದ 25 ತಿಂಗಳಿನಿಂದ 79,45,73,689 ರೂ ಆದಾಯ ಬಂದಿದೆ ಎಂದು ಸಭೆಗೆ ತಿಳಿಸಿದರು.

ಸದಸ್ಯರಾದ ಇಂದಿರಾನಗರ ರಘು, ನಿತ್ಯಾನಂದ,ಹೂವಮ್ಮ, ಅಪೂರ್ವ, ಕುಮಾರ್, ಜಯರಾಂ, ದೇವರಾಜ್, ಬೇಸಿಲ್, ಸೈಯದ್ ಶಫೀರ್ ಅಹಮ್ಮದ್, ಇಸ್ಮಾಯಿಲ್, ಸಂದೀಪ್‌ಕುಮಾರ್, ಶ್ರೀದೇವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net