

ಸೊರಬ: ಶಾಲೆಗೆ ಸರಿಯಾದ ಅವಧಿಗೆ ತಲುಪಲು ಬಸ್ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿನಿಯರು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ತಲಗಡ್ಡೆ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವರಿಗೆ ವಿದ್ಯಾರ್ಥಿನಿಯರು ಮನವಿ ಸಲ್ಲಿಸಿದರು. ತಲಗಡ್ಡೆ ಗ್ರಾಮದಿಂದ ಜಡೆ ಗ್ರಾಮಕ್ಕೆ ತೆರಳಲು ಶಾಲಾ ಅವಧಿಯಲ್ಲಿ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ತರಗತಿಗಳು ತಪ್ಪಿಹೋಗುತ್ತಿವೆ. ಅಲ್ಲದೆ ಸಂಜೆ ಮನೆಗೆ ಬರಲೂ ಸಮಸ್ಯೆಯಾಗಿದೆ. ಹಾಗಾಗಿ ನಮಗೆ ಶಾಲಾ ಅವಧಿಗೆ ಬಸ್ ವ್ಯವಸ್ಥೆ ಕಲ್ಪಿಸಿಕೊಡಿ. ಜತೆಗೆ ಗ್ರಾಮದೊಳಗೆ ಬಸ್ ಬಂದರೆ ರೋಗಿಗಳು ಆಸ್ಪತ್ರೆಗೂ ತೆರಳಲು ಅನುಕೂಲವಾಗಲಿದೆ ಎಂದು ವಿದ್ಯಾರ್ಥಿನಿಯರಾದ ಭವಾನಿ ಮತ್ತು ಸಿಂಚನಾ ಸಚಿವರಲ್ಲಿ ವಿನಂತಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಶೀಘ್ರವೇ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಮಕ್ಕಳಿಗೆ ಭರವಸೆ ನೀಡಿದರು.