

ಶಿರಹಟ್ಟಿ: ಪಟ್ಟಣದ ಬಸ್ ನಿಲ್ದಾಣಕ್ಕೆ ಮೂಲ ಸೌಲಭ್ಯ ಕಲ್ಪಿಸಬೇಕು ಹಾಗೂ ಸ್ಥಳೀಯ ಬಸ್ ಡಿಪೋದಿಂದ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಕೆಎಸ್‌ಆರ್‌ಟಿಸಿ ಜಿಲ್ಲಾಧಿಕಾರಿ ವಿವೇಕಾನಂದ ವಿಶ್ವಜ್ಞ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಕರವೇ ತಾಲೂಕಾಧ್ಯಕ್ಷ ರಫೀಕ್ ಕೆರಿಮನಿ ಮಾತನಾಡಿ, ತಾಲೂಕು ಕೇಂದ್ರ ಸ್ಥಳವಾದ ಶಿರಹಟ್ಟಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು, ಉತ್ತಮ ಶೌಚಗೃಹ, ಅಗತ್ಯವಿರುವಷ್ಟು ಅಸನಗಳ ವ್ಯವಸ್ಥೆ, ಬಸ್ ವೇಳಾ ಪಟ್ಟಿ, ವಿದ್ಯುತ್ ಬೆಳಕು ಇ್ಲಲ. ಅಲ್ಲದೆ, ನಿತ್ಯವೂ ಶಿರಹಟ್ಟಿ ಬಸ್ ನಿಲ್ದಾಣದ ಮಾರ್ಗವಾಗಿ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಆದರೆ, ಬಸ್‌ಗಳಿರುವುದು 10 ಮಾತ್ರ. ಹೀಗಾಗಿ ಪ್ರಯಾಣಿಕರು ಹುಬ್ಬಳ್ಳಿ, ಗದಗ, ಲಕ್ಷ್ಮೇಶ್ವರ, ಹಾವೇರಿ, ಮುಂಡರಗಿಯಿಂದ ಬಸ್ ಬರುವವರೆಗೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ ಹೀಗಾಗಿ ಅಗತ್ಯ ಸೌಲಭ್ಯ ಕಲ್ಪಿಸುವುದರ ಜತೆಗೆ ಹೆಚ್ಚುವರಿ ಬಸ್‌ಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಕ್ರಿಯಿಸಿದ ಡಿಸಿ ವಿವೇಕಾನಂದ ವಿಶ್ವಜ್ಞ, ಬಸ್ ನಿಲ್ಲಾಣಕ್ಕೆ ಅಗತ್ಯ ಮೂಲ ಸೌಲಭ್ಯ ಸೇರಿದಂತೆ ಹೆಚ್ಚುವರಿ ಬಸ್ ಸೌಲಭ್ಯ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕರವೇ ಜಿಲ್ಲಾಧ್ಯಕ್ಷ ದಾವಲಸಾಬ ಮುಳಗುಂದ, ಶ್ರೀನಿವಾಸ ಭಂಡಾರಿ, ಗೌಸ ಕಲಾವಂತ, ಸಹದೇವ ಕೋಟಿ, ವೆಂಕಟೇಶ ಬೇಲೂರ, ಈರಣ್ಣ ಬಾಗೇವಾಡಿ, ಮನ್ಸೂರ ಮಕಾನದಾರ, ಮಲ್ಲು ಸೂರಣಗಿ, ಖಾದರ ಟಪಾಲ್ ಇತರರಿದ್ದರು.