

ಮುಳಬಾಗಿಲು: ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸಿಕೊಡುವ ಸೇವೆ ನಿರಂತರವಾಗಿ ನಡೆಯುತ್ತಿರಬೇಕು. ಆಗ ಸರ್ಕಾರಿ ಶಾಲೆಗಳ ಉಳಿವಿನ ಜತೆಗೆ ದಾಖಲಾತಿಗಳು ಸಹ ಹೆಚ್ಚಾಗುತ್ತದೆ ಎಂದು ಮುಖ್ಯಶಿಕ್ಷಕಿ ಅಂಜಲಿದೇವಿ ಹೇಳಿದರು.
ತಾಲೂಕಿನ ಎನ್.ವಡ್ಡಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ಬೆಂಗಳೂರಿನ ಸಮಾಜ ಸೇವಕ ಚಂದ್ರು ಅವರಿಂದ ಧ್ವನಿವರ್ಧಕ ಹಾಗೂ ಯೋಗ ಮ್ಯಾಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಬಗ್ಗೆ ಕಾಳಜಿ ಹೊಂದಿರುವ ಜನರು ನಮ್ಮ ಶಾಲೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೀಡುವ ಎಲ್ಲ ವಸ್ತುಗಳನ್ನು ಸ್ವೀಕರಿಸಲಾಗುತ್ತದೆ. ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಮತ್ತಷ್ಟು ಹೆಚ್ಚಿನ ವಿದ್ಯಾಭ್ಯಾಸ ನೀಡಲು ಶ್ರಮಿಸಲಾಗುತ್ತದೆ ಎಂದು ತಿಳಿಸಿದರು.
ಸಮಾಜ ಸೇವಕ ಚಂದ್ರು ಮಾತನಾಡಿ, ಪ್ರತಿ ವಿದ್ಯಾರ್ಥಿ ಉತ್ತಮ ವಿದ್ಯಾಭ್ಯಾಸ ಪಡೆದು ಚೆನ್ನಾಗಿ ದುಡಿದು, ಸಂಪಾದಿಸಿ ಸಮಾಜಕ್ಕೆ ಕಾಣಿಕೆ ನೀಡಬೇಕು. ಪ್ರಪಂಚದ ಇತರೆ ಮುಂದುವರೆದ ದೇಶಗಳ ಅಭಿವೃದ್ಧಿಯ ಬಗ್ಗೆ ತಿಳಿದುಕೊಂಡು ಅದೇ ರೀತಿ ದೇಶದ ಅಭಿವೃದ್ಧಿಯಲ್ಲಿ ನಾವೂ ಒಬ್ಬರಾಗಬೇಕು ಎಂದು ಕಿವಿ ಮಾತು ಹೇಳಿದರು.