

ಹೂವಿನಹಡಗಲಿ: ಮಕ್ಕಳ ಮೇಲೆ ಒತ್ತಡ ಹಾಕದೆ ಸ್ವ ಇಚ್ಛೆಯಿಂದ ಅವರಿಗೆ ಬೇಕಾದ ವಿಭಾಗದಲ್ಲಿ ಅಭ್ಯಾಸ ಮಾಡಲು ಪಾಲಕರು ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.
ತಾಲೂಕಿನ ಹೊಳಲು ಗ್ರಾಮದ ವಿವೇಕಾನಂದ ಸರ್ಕಾರಿ ಪ್ರೌಢಶಾಲೆಯಲ್ಲಿ 1989-90ನೇ ಸಾಲಿನ ಎಸ್ಸೆಸೆಲ್ಸಿ ವಿದ್ಯಾರ್ಥಿಗಳ ಕ್ರಿಯಾಶೀಲ ಸೇವಾ ಟ್ರಸ್ಟ್ ಆಯೋಜಿಸಿದ್ದ ಶಿಕ್ಷಣ ಮೇಳ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪಾಲಕರೇ ಹೆಚ್ಚು ಒತ್ತಡ ಹಾಕುತ್ತಿದ್ದಾರೆ. ಮಕ್ಕಳು ಕಲಿಕೆಯಲ್ಲಿ ಹಿಂದುಳಿಯಲು ಕುಟುಂಬದ ವಾತಾವರಣವೂ ಕಾರಣವಾಗುತ್ತದೆ. ವಿದ್ಯಾರ್ಥಿಗಳ ಅಭಿರುಚಿ ಹಾಗೂ ಆಸಕ್ತಿಯ ವಿಷಯವನ್ನು ಚೆನ್ನಾಗಿ ಕಲಿಯುತ್ತಾರೆ. ಮಕ್ಕಳ ಜತೆಗೆ ಸ್ನೇಹದಿಂದ ಇರುವುದನ್ನು ಕಲಿಯಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ಸುಲಭವಾಗಿ ಸಾಧನೆ ಮಾಡುತ್ತಾರೆ ಎಂದರು.
ಜಿಲ್ಲೆಯ ಬಹುತೇಕ ಸರ್ಕಾರಿ ಶಾಲಾ ಕಟ್ಟಡಗಳು ಸೋರುತ್ತಿವೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಶೌಚಗೃಹವಿಲ್ಲ. ಇದರಿಂದ ಮಕ್ಕಳು ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದ ಕಾರಣ ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸರ್ಕಾರದ ಅಭಿವೃದ್ಧಿ ಹಣ ಬಳಸಿಕೊಂಡು ಈಗಾಗಲೇ ಶೌಚಗೃಹಗಳನ್ನು ನಿರ್ಮಿಸುತಿದ್ದೇವೆ. ಸಂಘ, ಸಂಸ್ಥೆಗಳು ಕೈಜೋಡಿಸಿದರೆ ಅನುಕೂಲವಾಗುತ್ತದೆ ಎಂದರು.
ಕ್ರಿಯಾಶೀಲ ಸೇವಾ ಟ್ರಸ್ಟ್ ಅಧ್ಯಕ್ಷ ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಕೆ.ಸಂತೋಷ, ಗ್ರಾಪಂ ಅಧ್ಯಕ್ಷ ಚನ್ನಬಸಪ್ಪ, ಉಪಾಧ್ಯಕ್ಷೆ ದಾಕ್ಷಾಯಣಿ, ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಸಿದ್ದೇಶ, ಉಪನ್ಯಾಸಕ ಆದರ್ಶ, ನಿವೃತ್ತ ಶಿಕ್ಷಕ ಕೆ.ಹನುಮಂತಪ್ಪ, ಎಚ್.ಡಿ. ಜಗ್ಗಿನ್ ಇತರರಿದ್ದರು.