

ಪಾಂಡವಪುರ : ಅಪಘಾತಕ್ಕೆ ಒಳಗಾದ ರಾಸುಗಳನ್ನು ತುರ್ತಾಗಿ ಪಶು ಆಸ್ಪತ್ರೆಗೆ ಸಾಗಿಸಲು ಮನ್‌ಮುಲ್ ಒಕ್ಕೂಟಕ್ಕೆ ನಮ್ಮ ತಂದೆ-ತಾಯಿ ಹೆಸರಿನಲ್ಲಿ ಆಂಬುಲೆನ್ಸ್ ಕೊಡುಗೆ ನೀಡಲಾಗುವುದು ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು. ತಾಲೂಕಿನ ಎಲೆಕೆರೆ ಹ್ಯಾಂಡ್ ಪೋಸ್ಟ್ ಸಭಾಂಗಣದಲ್ಲಿ ಪಾಂಡವಪುರ ತಾಲೂಕು ಹಾಲು ಉತ್ಪಾಕರ ಸಹಕಾರ ನೌಕರರ ಕ್ಷೇಮಾಭಿವೃದ್ಧಿ ಸಂಘ ಶುಕ್ರವಾರ ಹಮ್ಮಿಕೊಂಡಿದ್ದ ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಅಭಿನಂದನಾ ಸಭೆ ಹಾಗೂ ಫಲಾನುಭವಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೋಗಿಗಳಿಗೆ ಅನಾಹುತ, ತುರ್ತು ಸಂಭವಿಸಿದಾಗ ಅವರನ್ನು ಆಸ್ಪತ್ರೆಗಳಿಗೆ ತುರ್ತಾಗಿ ಸಾಗಿಸಲು ಆಂಬುಲೆನ್ಸ್‌ಗಳ ವ್ಯವಸ್ಥೆ ಇದೆ. ಆದರೆ ರಾಸುಗಳಿಗೆ ತುರ್ತು ಇದ್ದಾಗ ಅವುಗಳನ್ನು ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಗಳ ಕೊರತೆ ಇದೆ. ಆದ್ದರಿಂದ ತಮ್ಮ ತಂದೆ-ತಾಯಿ ಹೆಸರಿನ ಎಸ್‌ಟಿಜಿ ಚಾರಿಟಿ ಟ್ರಸ್ಟ್ ವತಿಯಿಂದ ಒಕ್ಕೂಟಕ್ಕೆ ವಾಹನ ಕೊಡುಗೆ ನೀಡಲಾಗುವುದು. ತಾಲೂಕಿನಲ್ಲಿ 9 ಸಾವಿರ ರಾಸುಗಳಿಗೆ ವಿಮೆ ಮಾಡಿಸಲಾಗಿದೆ, ಇನ್ನೂ 5 ಸಾವಿರ ರಾಸುಗಳಿಗೆ ವಿಮೆಯನ್ನು ಟ್ರಸ್ಟ್ ಮಾಡಿಸಲಿದೆ. ಶೇ.50 ವಿಮೆ ಹಣವನ್ನು ಪಾವತಿ ಮಾಡುವ ಮೂಲಕ ಅನ್ನದಾತನಿಗೆ ಬೆಂಬಲಿಸಲಾಗುವುದು ಎಂದರು. ಹಳ್ಳಿಗಳ ಡೇರಿ ಅಭಿವೃದ್ಧಿಗೆ ಸಂಸದ, ಎಂಎಲ್ ಸಿಗಳ ಅನುದಾನ ಪಡೆಯಲು ಯತ್ನಿಸುವೆ ಎಂದರು.