

ಬೆಂಗಳೂರು: ಬೀದಿನಾಯಿಗಳಿಗೆ ಮಾಂಸಾಹಾರದ ಊಟ ನೀಡುವ ಬಿಬಿಎಂಪಿ ನಡೆಗೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಪರ್ಯಾಯ ಆಹಾರ ನೀಡುವ ಕುರಿತು ಪಾಲಿಕೆ ಮೇಲೆ ಒತ್ತಡ ಹೇರಲಾಗುತ್ತಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 3 ಲಕ್ಷ ಬೀದಿನಾಯಿಗಳಿದ್ದು, ಈ ಪೈಕಿ ಸುಮಾರು ಶೇ.5 ಆಹಾರ ಕೊರತೆ ಉಂಟಾಗುತ್ತಿರುವ ಸಾಧ್ಯತೆ ಇದೆ. ಈ ಪ್ರಮಾಣವನ್ನು ಗಮನಿಸಿ ಅಷ್ಟು ಬೀದಿನಾಯಿಗಳಿಗೆ ಮಾಂಸಾಹಾರ ನೀಡುವುದರಿಂದ ಅವುಗಳ ಕ್ರಮೇಣ ಮಾಂಸ ಸೇವನೆಯ ರುಚಿಗೆ ಹೊರಳುತ್ತವೆ. ಮಾಂಸಾಹಾರ ಸಿಗದಿದ್ದಾಗ ಮನುಷ್ಯರ ಮೇಲೆ ಎರಗಿ ಸಾಧ್ಯತೆ ಇದೆ. ಅದರಲ್ಲೂ ಮಕ್ಕಳು ಹಾಗೂ ವೃದ್ಧರು ಬೀದಿನಾಯಿಗಳ ಉಪಟಳಕ್ಕೆ ಕಾರಣವಾಗಬಹುದು ಎಂಬ ಆತಂಕವನ್ನು ನಾಗರಿಕರು ಹೊರಹಾಕಿದ್ದಾರೆ.
ಬೀದಿನಾಯಿಗಳಿಗೆ ಆಹಾರ ನೀಡಲು ಯಾರೂ ಅಡ್ಡಿ ಮಾಡುವುದಿಲ್ಲ. ಪಾಲಿಕೆಯ ಕ್ರಮಕ್ಕೂ ಆಕ್ಷೇಪಣೆ ಇಲ್ಲ. ಆದರೆ, ಮಾಂಸಾಹಾರ ಬದಲು ಇತರ ಆಹಾರ ನೀಡಿದರೆ ಯಾವುದೇ ಸಮಸ್ಯೆ ಎದುರಾಗದು. ಈ ಸಂಗತಿಯನ್ನು ಅರಿಯದೆ ಪಾಲಿಕೆ ಅಧಿಕಾರಿಗಳು ಮಾಂಸಾಹಾರವನ್ನೇ ವಿತರಿಸುವ ಹಠಕ್ಕೆ ಬಿದ್ದರೆ ನಾಯಿಕಡಿತ ಪ್ರಕರಣಗಳು ಹೆಚ್ಚುತ್ತವೆ. ಇದು ಮತ್ತೊಂದು ಸಮಸ್ಯೆಗೆ ಅವಕಾಶ ಮಾಡಿಕೊಡಲಿದ್ದು, ಈಗಲೇ ಎಚ್ಚೆತ್ತುಕೊಂಡು ಸಹಾನುಭೂತಿಯಿಂದ ಪರಿಶೀಲಿಸಿ ಬದಲಿ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಕೆಲ ಮಾಜಿ ಕಾರ್ಪೊರೇಟರ್‌ಗಳು ಸಲಹೆ ನೀಡಿದ್ದಾರೆ.
ಪ್ರತಿ ವರ್ಷ 3-5 ಕೋಟಿ ಖರ್ಚು:
2019-20ರಿಂದ 2024-25ರವರೆಗೆ ಲಕ್ಷಕ್ಕೂ ಅಧಿಕ ಬೀದಿನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ನಾಯಿಗಳ ಸಂತಾನಶಕ್ತಿಹರಣ ಶಸಚಿಕಿತ್ಸೆ (ಎಬಿಸಿ) ಹಾಗೂ ರೇಬಿಸ್ ರೋಗ ನಿರೋಧಕ ಲಸಿಕೆ (ಎಆರ್‌ವಿ) ಗಾಗಿ ಪ್ರತಿ ವರ್ಷ 3-5 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.
ವಲಯವಾರು ಬೀದಿನಾಯಿಗಳ ವಿವರ:
ವಲಯ ಶ್ವಾನ ಸಂಖ್ಯೆ
ಪೂರ್ವ 44,302
ಪಶ್ಚಿಮ 28,482
ದಕ್ಷಿಣ 39,562
ಆರ್‌ಆರ್‌ನಗರ 52,968
ದಾಸರಹಳ್ಳಿ 23,170
ಯಲಹಂಕ 36,219
ಬೊಮ್ಮನಹಳ್ಳಿ 38,940
ಮಹದೇವಪುರ 46,333
ನಗರದಲ್ಲಿರುವ ಬೀದಿನಾಯಿಗಳ ಸಂಖ್ಯೆ:
ಶ್ವಾನ ವಿಧ 2019 2023
ಗಂಡು 2,05,660 1,65,341
ಹೆಣ್ಣು 1,04,316 82,757
ಒಟ್ಟು 3,09,898 2,79,335
ಬೀದಿನಾಯಿಗಳಿಗೆ ಆಹಾರ ನೀಡುವುದು ತಪ್ಪಲ್ಲ. ಆದರೆ, ಮಾಂಸಾಹಾರವನ್ನೇ ಕೊಡಬೇಕೆಂಬುದು ತಪ್ಪು. ಶ್ವಾನಗಳಿಗೆ ಮಾಂಸದ ರುಚಿ ತೋರಿಸಿದರೆ ನಿತ್ಯವೂ ಅಂತಹ ಆಹಾರವನ್ನೇ ಹುಡುಕಿಕೊಂಡು ಹೋಗುತ್ತವೆ. ಮಾಂಸಾಹಾರ ಸಿಗದಿದ್ದರೆ ಬೀದಿಯಲ್ಲಿ ಓಡಾಡುವವರನ್ನು ಕಚ್ಚುತ್ತದೆ. ನಾಯಿಗಳಿಂದ ಸಣ್ಣ ಮಕ್ಕಳಿಗೆ ಹೆಚ್ಚು ಅಪಾಯ ಇದೆ. ಬಿಬಿಎಂಪಿ ಅಧಿಕಾರಿಗಳು ಈ ಯೋಜನೆ ಕೈಬಿಟ್ಟು ಪರ್ಯಾಯ ವ್ಯವಸ್ಥೆ ಮಾಡಲಿ.
- ಜಿ.ಪದ್ಮಾವತಿ, ಮಾಜಿ ಮೇಯರ್
ನಗರದಲ್ಲಿ ಹಲವು ಎನ್‌ಜಿಒಗಳು ಬೀದಿನಾಯಿಗಳಿಗೆ ಆಹಾರ ನೀಡುವಲ್ಲಿ ಸಕ್ರಿಯವಾಗಿವೆ. ಪಾಲಿಕೆ ಕೂಡ ನಾಯಿಗಳಿಗೆ ಊಟ ಕೊಡುವುದಿದ್ದಲ್ಲಿ ಮಾಂಸಾಹಾರ ಬದಲು ಬೇರೆ ರೀತಿಯ ಆಹಾರ ನೀಡಲಿ. ನಗರದಲ್ಲಿ 3.5 ಲಕ್ಷ ನಾಯಿಗಳಿದ್ದು, ಈ ಪೈಕಿ 5 ಸಾವಿರಕ್ಕೆ ಮಾತ್ರ ಮಾಂಸಾಹಾರ ನೀಡುವ ಪಾಲಿಕೆ ಕ್ರಮ ಅವಿವೇಕತನದಿಂದ ಕೂಡಿದೆ. ಬೆಂಗಳೂರು ಸುತ್ತಮುತ್ತ ಖಾಲಿಯಿರುವ ಸರ್ಕಾರಿ ಜಾಗದಲ್ಲಿ ನಾಯಿಗಳಿಗೆ ನೆಲೆ ಕಲ್ಪಿಸಿದರೆ ಉತ್ತಮ.
- ಎನ್.ಆರ್.ರಮೇಶ್, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ