

ಬೇಲೂರು: ಪಟ್ಟಣದ ಚನ್ನಕೇಶವಸ್ವಾಮಿ ದೇಗುಲ ಆವರಣದಲ್ಲಿ ಭಾನುವಾರ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆನೆ ಕಾರ್ಯಪಡೆ ಹಾಗೂ ಇಟಿಎಫ್ ಸಿಬ್ಬಂದಿಗೆ ಶಾಸಕ ಎಚ್.ಕೆ.ಸುರೇಶ್ ಸಮವಸ್ತ್ರ ವಿತರಿಸಿದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತಾಲೂಕಿನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಅವುಗಳ ಚಲನವಲನ ಹಾಗೂ ಅವುಗಳು ಎಲ್ಲಿವೆ ಎಂಬುದನ್ನು ಗುರುತಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಅರಣ್ಯ ಇಲಾಖೆಯ ಆನೆ ಕಾರ್ಯಪಡೆ ಹಾಗೂ ಇಟಿಎಫ್ ಸಿಬ್ಬಂದಿಗೆ ಸಮವಸ್ತ್ರದೊಂದಿಗೆ ಅವರಿಗೆ ಸೂಕ್ತ ರಕ್ಷಣೆ ಸಿಗಬೇಕು ಎಂದರು.
ಕಳೆದ ಒಂದು ತಿಂಗಳಿಂದ ಕಾಡಾನೆ ದಾಳಿಗೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ರೈತರು, ಬೆಳೆಗಾರರು, ಕೂಲಿ ಕಾರ್ಮಿಕರ ಹೋರಾಟದ ಫಲವಾಗಿ ಕೆಲ ದಿನಗಳ ಹಿಂದೆ ಸಭೆ ಮಾಡಿದ್ದರು. ಅಲ್ಲಿ ನಾವು ಸಚಿವರು ಮತ್ತು ಸರ್ಕಾರಕ್ಕೆ ಮನವಿ ಮಾಡಿ ಕಾಡಾನೆಗಳ ಸಮಸ್ಯೆ ಶಾಶ್ವತ ಪರಿಹಾರ ಹುಡುಕುವ ಉದ್ದೇಶದಿಂದ ಆನೆಧಾಮಕ್ಕೆ ಸೂಕ್ತ ಸ್ಥಳ ಮತ್ತು 1 ಸಾವಿರ ಕೋಟಿ ರೂ. ಅನುದಾನ ಕೊಡಬೇಕೆಂದು ಮನವಿ ಮಾಡಿದ್ದ್ದೆವು. ಜತೆಗೆ ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನರು ಕಾಡಾನೆಗಳಿಂದ ನಲುಗಿ ಹೋಗಿದ್ದಾರೆ. ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಬೇಕಿದೆ ಎಂದರು.
ಬೇಲೂರು ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಕಾಡಾನೆ ಸಮಸ್ಯೆಯಿಂದ ಯಾವುದೇ ಅನಾಹುತವಾಗದಂತೆ ನೋಡಿಕೊಳ್ಳಬೇಕಿದೆ. ಉಪಟಳ ನೀಡುತ್ತಿರುವ 4 ಕಾಡಾನೆಗಳ ಹಿಡಿಯಲು ಮುಂದಾಗಲಿದ್ದಾರೆ ಎಂದರು.
ಎಸಿಎಫ್ ಮೋಹನ್ ಮಾತನಾಡಿ, ಆನೆ ಕಾರ್ಯಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಸಮವಸ್ತ್ರವನ್ನು ನೀಡುತ್ತಿದ್ದೇವೆ. ಮತ್ತು ಆನೆ ಕಾರ್ಯಪಡೆಗೆ 4 ಡಿಆರ್‌ಎಫ್‌ಒ ಹುದ್ದೆಗಳಿವೆ. ಆದರೆ ಇಲ್ಲಿ ಒಬ್ಬರೇ ಇದ್ದು ಮೂರು ಹುದ್ದೆಗಳು ಖಾಲಿ ಇದೆ. ಅರಣ್ಯದಲ್ಲಿ ಕೆಲಸ ಮಾಡುವುದಕ್ಕೆ 8 ಜನರಿರುವ ಸ್ಥಳದಲ್ಲಿ ಒಬ್ಬರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಬೇಲೂರು-ಆಲೂರು-ಸಕಲೇಶಪುರ ಸೇರಿ ಗುತ್ತಿಗೆ ಆಧಾರದಲ್ಲಿ 32 ಜನರು ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ಪ್ರತಿ ತಿಂಗಳು ಕೊಡಬೇಕಾದ ಸೌಲಭ್ಯದ ಹಣವನ್ನು ಜಮೆ ಮಾಡಿದ್ದೇವೆ. ಸದ್ಯ ವರ್ಷಕ್ಕೆ ಒಂದು ಜೊತೆ ಸಮವಸ್ತ್ರ ಕೊಡುತ್ತಿದ್ದೆವು. ಅನುದಾನ ಬಂದರೆ ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ ಕೊಡಲಾಗುವುದು ಎಂದರು.
ತಹಸೀಲ್ದಾರ್ ಎಂ.ಮಮತಾ, ಎಸಿಎಫ್ ಶರೀಫಾ, ವಲಯ ಅರಣ್ಯಾಧಿಕಾರಿ ಯತೀಶ್, ಉಪ ವಲಯ ಅರಣ್ಯಾಧಿಕಾರಿ ಮಂಜೇಗೌಡ, ರಘು, ಯತೀಶ್, ಅರ್ಜುನ್, ಸ್ಥಳೀಯ ಮುಖಂಡ ಸಿ.ಎಸ್.ಪ್ರಕಾಶ್ ಸೇರಿದಂತೆ ಸಿಬ್ಬಂದಿ ಇದ್ದರು.