ಕಟ್ಟಡ ಕಾರ್ಮಿಕರಿಗೆ ಸಮರ್ಪಕ ಸೌಲಭ್ಯ ಒದಗಿಸಿ

BLY- 28-5
ಕಟ್ಟಡ ಕಾರ್ಮಿಕರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದಿಂದ ಬಳ್ಳಾರಿಯ ಕಾರ್ಮಿಕ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
Published on

ಬಳ್ಳಾರಿ: ಕಟ್ಟಡ ಕಾರ್ಮಿಕರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದಿಂದ ಬಳ್ಳಾರಿಯ ಕಾರ್ಮಿಕ ಇಲಾಖೆ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್ ಮಾತನಾಡಿ, ಕಟ್ಟಡ ಕಾರ್ಮಿಕರ ಮಕ್ಕಳ ಸ್ಕಾಲರ್‌ಷಿಪ್, ಆರೋಗ್ಯ ಸೌಲಭ್ಯ, ಮನೆ ಕಟ್ಟಿಕೊಳ್ಳಲು ಸಹಾಯಧನ ಇನ್ನಿತರ ಘೋಷಿತ ಸೌಲಭ್ಯಗಳ ಸಮರ್ಪಕ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಕಟ್ಟಡ ಕಾರ್ಮಿಕರಿಗೆ ನ್ಯಾಯಯುತ ಹಕ್ಕುಗಳನ್ನು ಒದಗಿಸಲು, ಹೋರಾಟದ ಒತ್ತಡದಿಂದ ಕಲ್ಯಾಣ ಮಂಡಳಿಯು ಅಸ್ತಿತ್ವಕ್ಕೆ ಬಂದಿದೆ. ಈ ಮಂಡಳಿಯು ಕಟ್ಟಡ ಕಾರ್ಮಿಕರಿಗೆ ಎಲ್ಲಾ ಘೋಷಿತ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮಕೈಗೊಳ್ಳಬೇಕಿತ್ತು. ಆದರೆ ಸಕಾಲದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡದೆ ಮಂಡಳಿಯು ವಿಳಂಬ ನೀತಿಯನ್ನು ಅನುಸರಿಸಿ, ಕಾರ್ಮಿಕರನ್ನು ಹಕ್ಕುಗಳಿಂದ ವಂಚಿತರನ್ನಾಗಿಸುತ್ತಿರುವುದು ಅತ್ಯಂತ ಖಂಡನೀಯ ಎಂದರು.

ಕಳೆದ ಎರಡು ವರ್ಷಗಳಿಂದ ಬರಬೇಕಾದ ಶೈಕ್ಷಣಿಕ ಸಹಾಯಧನ ಇನ್ನೂ ಬಂದಿಲ್ಲ. ನೋಂದಾಯಿತ ಕಾರ್ಮಿಕನ ಇಡೀ ಕುಟುಂಬಕ್ಕೆ ಆರೋಗ್ಯ ಸೌಲಭ್ಯ ಮರೀಚಿಕೆಯಾಗಿದೆ. ಎಲ್ಲರಿಗೂ ಸೂರು ಕಟ್ಟುವ ಈ ಕಟ್ಟಡ ಕಾರ್ಮಿಕರು ತಮಗೊಂದು ಗೂಡು ಕಟ್ಟಿಕೊಳ್ಳಲು ಆಗುತ್ತಿಲ್ಲ. ಇಂದಿಗೂ ಬಹುತೇಕ ನೈಜ ಕಟ್ಟಡ ಕಾರ್ಮಿಕರು ನೋಂದಣಿ ಆಗದೆ ಹೊರಗೂಳಿಯುವುದು ಒಂದು ಕಡೆಯಾದರೆ, ಮತ್ತೊಂದೆಡೆ ಕಟ್ಟಡ ಕಾರ್ಮಿಕರಲ್ಲದವರ ನೋಂದಣಿ ಅವ್ಯಾಹತವಾಗಿವಾಗಿ ಸಾಗಿದೆ ಎಂದು ದೂರಿದರು.
ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷೆ ಎ.ಶಾಂತಾ, ಮುಖಂಡರಾದ ಜಯರಾಜ್, ರವಿಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net