

ತಿಪಟೂರು : ಜನಹಿತ ಮರೆತ ನಗರಸಭೆ ಕಾರ್ಯವೈಖರಿ ಖಂಡಿಸಿ ಸೋಮವಾರ ಜೆಡಿಎಸ್ನಿಂದ ನಗರದ ಶ್ರೀ ಕೆಂಪಮ್ಮ ದೇವಾಸ್ಥಾನದಿಂದ ದೊಡ್ಡಪೇಟೆರಸ್ತೆ ಮಾರ್ಗವಾಗಿ ಪ್ರತಿಭಟನಾ ರ್ಯಾಲಿ ನಡೆಸಿ, ನಗರಸಭೆ ಆಯುಕ್ತ ವಿಶ್ವೇಶ್ವರ ಬದರಗಡೆ ಅವರಿಗೆ ಮನವಿ ಸಲ್ಲಿಸಿದರು.
ಜೆಡಿಎಸ್ ಕಾರ್ಯಕರ್ತರು, ಸಿಂಗ್ರಿ ನಂಜಪ್ಪ ವೃತ್ತದಲ್ಲಿ ಸಮಾವೇಷಗೊಂಡು ನಗರಸಭೆ ಅಧಿಕಾರಿಗಳ ಕಾರ್ಯವೈಖರಿ ಖಂಡಿಸಿ ದಿಕ್ಕಾರ ಕೂಗಿದರು.
ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿ, ನಗರದ ಜನತೆಗೆ ಸಮರ್ಪಕ ಕುಡಿಯುವ ನೀರು ಪೂರೈಸುವಲ್ಲಿ ನಗರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ. ನಗರ ಸಮೀಪದ ನಾಲೆಯಲ್ಲಿ ಯತೇಚ್ಚ ನೀರು ಹರಿಯುತ್ತಿದ್ದರೂ ಅದನ್ನು ಸಮರ್ಪಕವಾಗಿ ಬಳಸಿಕೊಂಡು ನಗರದ ಜನತೆಗೆ ಪೂರೈಸುವ ಬದಲು ತಾತ್ಸಾರ ಧೋರಣೆ ತೊರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಟಿಪಿ ಘಟಕ ಸೇರಬೇಕಾದ ಯುಜಿಡಿ ತ್ಯಾಜ್ಯ ನೀರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಉಕ್ಕಿ ಹರಿದು ಹಳ್ಳ, ಕೊಳ್ಳದ ಮೂಲಕ ಕುಡಿಯುವ ನೀರಿನ ಕೆರೆ ಸೇರುತ್ತಿದ್ದರೂ ಹೊಸ, ಹೊಸ, ಯಂತ್ರೋಪಕರಗಳು ಮತ್ತು ಮೋಟಾರ್ ಅಳವಡಿಕೆಗೆ ಲಕ್ಷಾಂತರ ಖರ್ಚು ಮಾಡಲಾಗಿದೆ ಎಂಬ ಸಬೂಬು ಹೇಳಿಕೊಂಡು ಕಾಲಾಹರಣ ಮಾಡುತ್ತಿರುವ ಎಂದು ಆರೋಪಿಸಿದರು.
ಯುಜಿಡಿ ತ್ಯಾಜ್ಯಯುಕ್ತ ನೀರು ನಗರ ಮೀಪದ ಕೊಪ್ಪ, ಹಿಂಡಿಸ್ಕೆರೆ, ಈಚನೂರು, ಶಾಂತನಹಳ್ಳಿ ಗ್ರಾಮದ ರಸ್ತೆಗಳು ಮತ್ತು ತೋಟ, ಜಮೀನುಗಳ ಮೂಲಕ ಹರಿದು ಕುಡಿಯುವ ನೀರಿನ ಕೆರೆ ಸೇರುವ ಜತೆಗೆ ಜೀವಜಲಕ್ಕೂ ಕುತ್ತು ಬಂದಿದೆ ಎಂದರು.
ಪ್ರತಿಭಟನಾ ನಿರತರು ನಗರಸಭೆ ಆವರಣ ಪ್ರವೇಶಿಸಬಾರದೆಂದು ಪೊಲೀಸರು ಪ್ರವೇಶದ್ವಾರ ಬಂದ್ ಮಾಡಿದರು.
ಮುಖಂಡರಾದ ಎಂ.ಎಸ್ ಶಿವಸ್ವಾಮಿ, ಗೊರಗೊಂಡನಹಳ್ಳಿ ಸುದರ್ಶನ್, ಇಮ್ರಾನ್ಖಾನ್, ಲೋಕೇಶ್, ಮಂಜುನಾಥ್, ಶಿವಪ್ಪ, ರುದ್ರೇಶ್, ಜಯಮ್ಮ ಇದ್ದರು.