ರೈತರಿಗೆ ಸಮರ್ಪಕ ಡಿಎಪಿ ಗೊಬ್ಬರ ಪೂರೈಸಿ

SGN MANAVI
Published on

ಶಿಗ್ಗಾಂವಿ: ರೈತರಿಗೆ ಮುಂಗಾರು ಬಿತ್ತನೆಗೆ ಸಮರ್ಪಕವಾಗಿ ಡಿಎಪಿ ಗೊಬ್ಬರ ಪೂರೈಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಸಿರು ಸೇನೆಯ ತಾಲೂಕು ಸಂಘಟನೆ ಮುಖಂಡರು ಗುರುವಾರ ತಹಸೀಲ್ದಾರ್ ಮತ್ತು ತಾಲೂಕು ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಮುಂಗಾರು ಬಿತ್ತನೆಗೆ 3 ಲಕ್ಷ ಮೆಟ್ರಿಕ್ ಟನ್ ಡಿಎಪಿ ಗೊಬ್ಬರದ ಅವಶ್ಯಕತೆ ಇದ್ದು, ಆದರೆ, 300 ಮೆಟ್ರಿಕ್ ಟನ್ ಮಾತ್ರ ಲಭ್ಯವಿದೆ. ಇದರಿಂದ ಗೊಬ್ಬರಕ್ಕಾಗಿ ರೈತರು ದಿನವಿಡಿ ಅಲೆದಾಡುವಂತಾಗಿದೆ. ಕೆಲವು ವ್ಯಾಪಾರಸ್ಥರು ಡಿಎಪಿ ಗೊಬ್ಬರದ ಜತೆಗೆ ರೈತರಿಗೆ ಅವಶ್ಯವಿರದ ಇತರೆ ಗೊಬ್ಬರವನ್ನು ಲಿಂಕ್ ಮೂಲಕ ಕೊಡುತ್ತಿದ್ದಾರೆ. ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಆರ್ಥಿಕ ಹೊರೆಯಾಗುತ್ತಿದ್ದು ಕೂಡಲೇ ಅಧಿಕಾರಿಗಳು ಮೇ 26ರೊಳಗಾಗಿ ರೈತರಿಗೆ ಸಮರ್ಪಕವಾಗಿ ಗೊಬ್ಬರ ಪೂರೈಸಬೇಕು ಮತ್ತು ಅಕ್ರಮ ಮಾರಾಟಗಾರರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತಹಸೀಲ್ದಾರ್ ಕಾರ್ಯಾಲಯದ ಮುಂದೆ ಸೋಮವಾರ ಗೊಬ್ಬರಕ್ಕಾಗಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಹಸಿರು ಸೇನೆ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಕಂಕನವಾಡ, ತಾಲೂಕಾಧ್ಯಕ್ಷ ಆನಂದ ಕೆಳಗಿನಮನಿ, ಶಂಕರಗೌಡ ಪಾಟೀಲ, ಗಿರೀಶ ಪಾಟೀಲ, ಬಸವರಾಜ, ಮಾರುತಿ, ಸಿ.ಬಿ. ಹಿರೇಮಠ, ರಮೇಶ ಜೋಳದ, ಈಶ್ವರ ದೇವರಮನಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net