ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಿ

Provide adequate bus facility
ಚಿಮ್ಮಡ ಗ್ರಾಮದಲ್ಲಿ ಸಮರ್ಪಕ ಬಸ್ ಸೌಲಭ್ಯ ನೀಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬಸ್ ತಡೆದು ಸೋಮವಾರ ಪ್ರತಿಭಟನೆ ನಡೆಸಿದರು.
Published on

ಚಿಮ್ಮಡ: ಗ್ರಾಮದಲ್ಲಿ ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸ್ಥಳೀಯ ಮಾರ್ಗವಾಗಿ ಸಂಚರಿಸುವ ಎಲ್ಲ ಬಸ್‌ಗಳನ್ನು ತಡೆದು ಸೋಮವಾರ ಬೆಳಗ್ಗೆ ದಿಢೀರ್ ಪ್ರತಿಭಟನೆ ನಡೆಸಿದರು.

ನಿತ್ಯ ಗ್ರಾಮದಿಂದ 300ಕ್ಕೂ ಅಧಿಕ ವಿದ್ಯಾರ್ಥಿಗಳು ರಬಕವಿ, ಬನಹಟ್ಟಿ, ಜಮಖಂಡಿ ನಗರಗಳಿಗೆ ಉನ್ನತ ಶಿಕ್ಷಣ ಪಡೆಯಲು ತೆರಳುತ್ತಾರೆ. ಆದರೆ, ಸಮರ್ಪಕ ಬಸ್ ಸೌಲಭ್ಯ ಇಲ್ಲದ್ದರಿಂದ ಕಾಲೇಜುಗಳಿಗೆ ತೆರಳಲು ತೊಂದರೆಯಾಗುತ್ತಿದೆ. ಅಲ್ಲದೆ, ಮಹಾಲಿಂಗಪುರದಲ್ಲೇ ಬಸ್‌ಗಳು ಭರ್ತಿ ಆಗಿ ಬರುತ್ತಿದ್ದು, ಬಸ್‌ಗಳಲ್ಲಿ ಸ್ಥಳಾವಕಾಶ ಇಲ್ಲದ್ದರಿಂದ ಬಸ್‌ಗಳನ್ನೂ ನಿಲ್ಲಿಸುತ್ತಿಲ್ಲ. ಹೀಗಾಗಿ ತರಗತಿಗಳನ್ನು ತಪ್ಪಿಸಿಕೊಳ್ಳಬೇಕಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ, ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸಿರುವುದರಿಂದ ಕೆಲ ಬಸ್‌ಗಳು ಬಸ್ ನಿಲ್ದಾಣಗಳಲ್ಲಿ ನಿಲ್ಲಿಸದೆ ದೂರದಲ್ಲೇ ಪ್ರಯಾಣಿಕರನ್ನು ಇಳಿಸಿ ಹೊರಡುತ್ತಿವೆ. ಈ ಕುರಿತು ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಸ್ಥಳಕ್ಕೆ ತಹಸೀಲ್ದಾರ್ ಡಾ.ದೊಡ್ಡಪ್ಪ ಹೂಗಾರ, ಮಹಾಲಿಂಗಪುರ ಠಾಣಾಧಿಕಾರಿ ಪ್ರವೀಣ ಬೀಳಗಿ, ಜಮಖಂಡಿ ಶಾಖಾ ವ್ಯವಸ್ಥಾಪಕರ ಪರವಾಗಿ ಬನಹಟ್ಟಿ ಸಾರಿಗೆ ನಿಯಂತ್ರಕ ಮರನೂರ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ನಂತರ ಮಾತನಾಡಿದ ಬನಹಟ್ಟಿ ಸಾರಿಗೆ ನಿಯಂತ್ರಕ, ಗ್ರಾಮದ ಮಾರ್ಗವಾಗಿ ಸಂಚರಿಸುವ ಬೇರೆ ವಿಭಾಗದ ಎಲ್ಲ ಬಸ್‌ಗಳನ್ನು ಗ್ರಾಮದಲ್ಲಿ ನಿಲ್ಲಿಸಲು ಈಗಾಗಲೇ ಮನವಿ ಕಳುಹಿಸಲಾಗಿದೆ.

ವಿದ್ಯಾರ್ಥಿಗಳಿಗಾಗಿಯೇ ಗ್ರಾಮಕ್ಕೆ ಒಂದು ವಸತಿ ಬಸ್ ನೀಡಲಾಗಿದ್ದು, ಇನ್ನೊಂದು ಬಸ್ ಬೆಳಗ್ಗೆ 9.15 ಗಂಟೆಗೆ ಗ್ರಾಮದಲ್ಲಿರುವಂತೆ ಕ್ರಮ ಕೈಗೊಳ್ಳಲಾಗುವುದು. ಬನಹಟ್ಟಿ ವಿದ್ಯಾಲಯಗಳಿಗೆ ಗೋಕಾಕ ಹಾಗೂ ಜಮಖಂಡಿ ಘಟಕದ ಎಲ್ಲ ವೇಗರಹಿತ ಬಸ್‌ಗಳ ನಿಲುಗಡೆಗೂ ಅವಕಾಶ ಕಲ್ಪಿಸಲಾಗಿದೆ. ಓರ್ವ ಟಿಸಿ ಕಳುಹಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುವುದು. ಅಲ್ಲದೆ, ಎರಡು ದಿನದಲ್ಲೇ ಜಮಖಂಡಿ ಘಟಕದ ವ್ಯವಸ್ಥಾಪಕರು ಆಗಮಿಸಿ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಲಿದ್ದಾರೆ ಎಂದು ಭರವಸೆ ನೀಡಿದರು.

ಗ್ರಾಪಂ ಅಧ್ಯಕ್ಷ ಆನಂದ ಕವಟಿ, ಮಾಜಿ ಅಧ್ಯಕ್ಷ ಪರಪ್ಪ ಪಾಲಭಾವಿ, ಬಸವರಾಜ ಕುಂಚನೂರ, ಬೀರಪ್ಪ ಹಳೆಮನಿ, ಮನೋಜ ಹಟ್ಟಿ, ಎಎಸ್‌ಐ ಶಿವಪ್ಪ ಹುದ್ದಾರ, ಕಲ್ಮೇಶ ಬುದ್ನಿ, ಪಿ.ಎಸ್. ಚಿಲಾಪುರ ಸೇರಿ ನೂರಾರು ಜನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net