ಬಳ್ಳಾರಿ : ಜಿಲ್ಲೆಯಲ್ಲಿ ಈವರೆಗೂ ವಿವಿಧ ಇಲಾಖೆಗಳಿಂದ ವಿವಿಧ ಯೋಜನೆಗಳಡಿ ಸಾಧಿಸಲಾದ ಪ್ರಗತಿಯ ಪೂರಕ ಮಾಹಿತಿಯನ್ನು ಒದಗಿಸಬೇಕು ಎಂದು ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಮೇ 21 ಹಾಗೂ 22ರಂದು ನಡೆಯುವ ರಾಜ್ಯಮಟ್ಟದ ಪ್ರಗತಿ ಪರಿಶೀಲನಾ ಸಭೆ ಹಿನ್ನೆಲೆ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು. ಸರಬರಾಜಗುವ ಕುಡಿಯುವ ನೀರಿನ ನಿಯಮಿತ ಪರೀಕ್ಷೆ, ಕ್ಲೋರಿನೇಷನ್ ತಪಾಸಣೆ ಹಾಗೂ ಇತರೆ ಕೈಗೊಳ್ಳುವ ಕಾರ್ಯದ ಕುರಿತು ಸಂಪೂರ್ಣ ಮಾಹಿತಿ ಒದಗಿಸಬೇಕು. ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಮತ್ತು ಬಾಕಿ ಇರುವ ದಾಸ್ತಾನು, ಬೆಳೆ ವಿಮೆಗೆ ರೈತರ ನೋಂದಣಿ ವಿವರನ್ನು ನೀಡಿ ಎಂದರು.
ಗಂಗ ಕಲ್ಯಾಣ ಯೋಜನೆಯಡಿ ಆಯ್ಕೆಗೊಂಡ ಫಲಾನುಭವಿಗಳಿಗೆ ಯಾವುದೇ ಕಾರಣಕ್ಕೂ ವಿಳಂಬ ಆಗದ ರೀತಿಯಲ್ಲಿ ಯೋಜನೆ ತಲುಪಿಸಬೇಕು. ಸಿಎಂ ಇಂದಿರಾ ಕ್ಯಾಂಟೀನ್‌ಗಳ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ವಿವಿಧೆಡೆ ಬಾಕಿ ಇರುವ ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣ ಕಾಮಗಾರಿಯನ್ನು ಸ್ಥಳೀಯ ಶಾಸಕರ ಸಹಕಾರದಲ್ಲಿ ಪೂರ್ಣಗೊಳಿಸಬೇಕು. ಇಂದಿರಾ ಕ್ಯಾಂಟೀನ್ ಗಳಲ್ಲಿ ಸಿಸಿಟಿವಿ ಅಳವಡಿಕೆ ಹಾಗೂ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪೂರಕ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿ ಎಂದರು.
ಜಿಲ್ಲೆಯಲ್ಲಿ ಬಿ-ಖಾತಾ ವಿತರಣೆಯಲ್ಲಿ ಪ್ರಗತಿ ಹೊಂದಬೇಕು, ಬಿ-ಖಾತಾ ಅಭಿಯಾನ ಹೆಚ್ಚಾಗಿ ಆಯೋಜಿಸಬೇಕು. ಜನತಾ ದರ್ಶನ ಕಾರ್ಯಕ್ರಮಗಳಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಲ್ಲಿಕೆಯಾದ ಅಹವಾಲು ವಿಲೇವಾರಿ, ಬಾಕಿಯಿರುವ ಎಲ್ಲ ಅರ್ಜಿಗಳನ್ನು ನಿಯಾಮನುಸಾರವಾಗಿ ಇಲಾಖೆಗಳು ವಿಲೇವಾರಿ ಮಾಡಬೇಕು, ಕೇವಲ ಹಿಂಬರಹ ನೀಡುವಂತಹದ್ದಲ್ಲ, ಯಾವುದೇ ಅರ್ಜಿಗಳನ್ನು ತಮ್ಮಲ್ಲಿ ಇಟ್ಟುಕೊಳ್ಳಬಾರದು. ಬಾಕಿಯಿರುವ ಪ್ರಕರಣಗಳನ್ನು ವಿಲೇ ಮಾಡುವ ಕಾರ್ಯವಾಗಬೇಕು ಎಂದು ನಿರ್ದೇಶಿಸಿದರು.
ಎಸ್ಸಿ-ಎಸ್ಪಿ ಮತ್ತು ಟಿಎಸ್ಪಿ ಯೋಜನೆ ಅನುದಾನ ಬಳಕೆ, ಅರಣ್ಯ ಹಕ್ಕು ಕಾಯ್ದೆಯಡಿ ಬಾಕಿಯಿರುವ ಅರ್ಜಿಗಳ ಮಾಹಿತಿ ಹಾಗೂ
ಸರ್ಕಾರಿ ಕಾಲೇಜುಗಳ ಜಮೀನು, ವಸತಿ ನಿಲಯ, ಅಂಗನವಾಡಿ, ಸ್ಮಶಾನ ಭೂಮಿ ಖರೀದಿ ಯಾವುದೇ ಬಾಕಿ ಇದ್ದರೂ ಗಮನಕ್ಕೆ ತರಬೇಕು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಭಾಗಿಯಾಗುವುದರಿಂದ ತಮ್ಮ ಇಲಾಖೆಗಳಿಗೆ ಬೇಕಾದ ಪ್ರಸ್ತಾವನೆ, ಬೇಡಿಕೆಗಳಿದ್ದಲ್ಲಿ ಸ್ಪಂದಿಸಲಾಗುವುದು ಎಂದರು
ಜಿಲ್ಲಾಮಟ್ಟದ ಅಧಿಕಾರಿಗಳು ವಾರದೊಳಗಾಗಿ ಸಂಪೂರ್ಣ ಮಾಹಿತಿಯನ್ನು ಸೂಕ್ತ ನಮೂನೆಯಲ್ಲಿ ತಪ್ಪಿಲ್ಲದಂತೆ ಅಧಿಕಾರಿಗಳೇ ಖುದ್ದಾಗಿ ನಮೂದಿಸಬೇಕು. ಕಡ್ಡಾಯವಾಗಿ ಪ್ರಗತಿ ವರದಿಯನ್ನು ನಿಗದಿತ ಅವಧಿಯೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ತಿಳಿಸಿದರು.