ಗ್ರಾಮೀಣ ಭಾಗಕ್ಕೆ ಹೆಚ್ಚುವರಿ ಬಸ್‌ ಸೌಲಭ್ಯ ಕಲ್ಪಿಸಿ

protest
Published on

ಲಕ್ಷ್ಮೇಶ್ವರ: ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ಜಿಲ್ಲಾ ಘಟಕದಿಂದ ವಿದ್ಯಾರ್ಥಿಗಳು ಮಂಗಳವಾರ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಎಬಿವಿಪಿ ಜಿಲ್ಲಾ ಸಹ ಸಂಚಾಲಕ ಕಲ್ಲನಗೌಡ ಪಾಟೀಲ ಮಾತನಾಡಿ, ‘ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದ ನಂತರ ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜಿಗೆ ತೆರಳಲು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಬಸ್‌ಗಳಲ್ಲಿ ಜನಸಂದಣಿ ಹೆಚ್ಚಾಗಿದೆ. ತಾಲೂಕನ ವಿವಿಧ ಗ್ರಾಮಗಳಿಂದ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಗದಗ, ಹುಬ್ಬಳ್ಳಿ, ಹಾವೇರಿ ಭಾಗಕ್ಕೆ ತೆರಳುತ್ತಾರೆ. ಶಕ್ತಿ ಯೋಜನೆಯಿಂದ ಎಲ್ಲ ಬಸ್‌ಗಳು ಮಹಿಳೆಯರಿಂದ ಗಿಜಿಗುಡುತ್ತಿವೆ. ಬಸ್‌ನಲ್ಲಿ ಸುಮಾರು 150 ಜನರು ಪ್ರಯಾಣಿಸುತ್ತಾರೆ ಯಾವಾಗಲೂ ಬಸ್‌ಗಳು ತುಂಬಿಕೊಂಡೇ ಬರುವುದರಿಂದ ವಿದ್ಯಾರ್ಥಿಗಳಿಗೆ ಹತ್ತಲು ಜಾಗವೇ ಇರುವುದಿಲ್ಲ. ವಿದ್ಯಾರ್ಥಿನಿಯರು ಬಸ್‌ನ ಬಾಗಿಗಲ್ಲಿ ಜೋತು ಬಿದ್ದು ಹೋಗಬೇಕಾಗಿದೆ. ತರಗತಿಗಳಿಗೆ ಹೋಗಲು ವಿಳಂಬವಾಗುತ್ತಿದೆ. ಹೀಗಾಗಿ ಗ್ರಾಮೀಣ ಪ್ರದೇಶಗಳಿಂದ ಶಾಲಾ-ಕಾಲೇಜ್‌ಗಳಿಗೆ ಹೋಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚಿನ ಬಸ್‌ಗಳ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದರಿಂದ ಕೆಲಕಾಲ ವಾಹನದ ದಟ್ಟಣೆ ಉಂಟಾಗಿತ್ತು. ವಿದ್ಯಾರ್ಥಿಗಳ ಸಮಸೆಯಗೆ ಸ್ಪಂದಿಸಿದ ತಹಸೀಲ್ದಾರ್ ಕೆ. ಆನಂದಶೀಲ ಅವರು, ‘ಅಧಿಕಾರಿಗಳೊಂದಿಗೆ ಮಾತನಾಡಿ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಲಾಗುತ್ತದೆ’ ಎಂದು ಭರವಸೆ ನೀಡಿದರು. ಪಿಎಸ್‌ಐ ಯೂಸುಫ್ ಜಮೂಲಾ, ಗಿರೀಶ ನರಗುಂದಕರ, ಮಹೇಶ ಲಮಾಣಿ, ಮಾಂತೇಶ ಕಲಘಟಗಿ, ಚೇತನ ಯಲಿಗಾರ, ಚಂದ್ರು ಕುಂದಗೋಳ, ರಕ್ಷಿತಾ ಬಾಲೆಹೊಸೂರ. ಲಕ್ಷ್ಮೀ ಕಾಕೋಳ, ಪ್ರವೀಣ ಬನ್ನಿಕೊಪ್ಪ, ನಂದೀಶ ಅಂಗಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net