ನಿಖರ ಮಾಹಿತಿ ಒದಗಿಸಿ: ವಿ.ಅನ್ಬುಕುಮಾರ್

5adarshkdga7
Published on

ಮಡಿಕೇರಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಂದರ್ಭದಲ್ಲಿ ಜಿಲ್ಲೆಯ ಯಾವ ಯಾವ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆಯಲಾಗಿದೆ ಎಂಬ ಬಗ್ಗೆ ನಿಖರ ಕಾರಣ ತಿಳಿಸುವಂತೆ ಕಂದಾಯ ಅಧಿಕಾರಿಗಳಿಗೆ ಮತದಾರರ ಪಟ್ಟಿ ವೀಕ್ಷಕ ವಿ.ಅನ್ಬುಕುಮಾರ್‌ರವರು ಸ್ಪಷ್ಟ ನಿರ್ದೇಶನ ನೀಡಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ’ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ’ ಸಂಬಂಧಿಸಿದಂತೆ ಇದುವರೆಗೆ ಕೈಗೊಳ್ಳಲಾಗಿರುವ ಕಾರ್ಯ ಬಗ್ಗೆ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.


ಈಗಾಗಲೇ ನ೯ ರಿಂದ ಒಂದು ತಿಂಗಳ ಕಾಲ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ನಡೆದಿದೆ. ಈ ಸಂದರ್ಭದಲ್ಲಿ ಪ್ರತೀ ಮತಗಟ್ಟೆವಾರು ವಿವಿಧ ಕಾರಣಗಳಿಂದ(ನಿಧನ ಹೊಂದಿರುವವರು, ವಲಸೆ ಹೋಗಿರುವವರು) ಮತದಾರರ ಪಟ್ಟಿಯಿಂದ ತೆಗೆದಿರುವ ಬಗ್ಗೆ ಕಾರಣ ತಿಳಿಸಬೇಕು. ಜತೆಗೆ ಕುಟುಂಬದವರಿಗೆ ಮಾಹಿತಿ ನೀಡಬೇಕು. ಈ ಸಂಬಂಧ ನೋಂದಣಿ ಅಂಚೆ ಮೂಲಕ ಪತ್ರ ತಲುಪಿರಬೇಕು. ರಿಜಿಸ್ಟ್ರರ್ ಪೋಸ್ಟ್ ಮಾಡಿರುವುದಕ್ಕೆ ಕಡತದಲ್ಲಿ ಜತನ ಮಾಡಿಕೊಳ್ಳುವಂತೆ ಕಂದಾಯ ಅಧಿಕಾರಿಗಳಿಗೆ ಮತದಾರರ ಪಟ್ಟಿ ವೀಕ್ಷಕರು ತಾಕೀತು ಮಾಡಿದರು.


ಚುನಾವಣೆಯ ಮತದಾನ ಸಂದರ್ಭದಲ್ಲಿ ಯಾರೂ ಸಹ ಮತದಾರರ ಪಟ್ಟಿಯಿಂದ ತಮ್ಮ ಹೆಸರು ಬಿಟ್ಟು ಹೋಗಿದೆ ಎಂಬ ದೂರು ಕೇಳಿ ಬರಬಾರದು. ಆದ್ದರಿಂದ ಪ್ರತೀ ಮತಗಟ್ಟೆಗೆ ಎಲ್ಲಾ ಹಂತದ ಅಧಿಕಾರಿಗಳು ತೆರಳಿ ಬಿಎಲ್‌ಒಗಳಿಂದ ಸ್ಪಷ್ಟ ಮಾಹಿತಿ ಪಡೆಯುವುದರ ಜತೆಗೆ, ರ‌್ಯಾಂಡಂ ಆಗಿ ಪರಿಶೀಲಿಸಬೇಕು. ಆ ಹಿನ್ನೆಲೆಯಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಜವಾಬ್ದಾರಿ ಹಂಚಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.


ಮತದಾರರ ಪಟ್ಟಿಯಿಂದ ಹೆಸರು ತೆಗೆದಿರುವ ಸಂಬಂಧ ಸ್ಥಳ ಮಹಜರು ಮಾಡಬೇಕು. ಸ್ಥಳ ಪರಿಶೀಲಿಸಿದ ದಿನಾಂಕ, ಛಾಯಾಚಿತ್ರ ಸಹಿತ ಮಾಹಿತಿ ಒದಗಿಸಬೇಕು. ಮತದಾರರ ಪಟ್ಟಿಯಿಂದ ಮತದಾರರ ಹೆಸರು ತೆಗೆಯಲಾಗಿರುವ ಮತಗಟ್ಟೆಗೆ ಭೇಟಿ ನೀಡಿ ಮಾಹಿತಿ ಪಡೆಯಬೇಕು. ನಮೂನೆ-೬, ೭, ೮, ೮ ಎ ಮಾಹಿತಿ ಇರಬೇಕು. ಮತಗಟ್ಟೆ ಸಂಖ್ಯೆವಾರು ಸ್ಪಷ್ಟ ಮಾಹಿತಿ ಒದಗಿಸಬೇಕು. ಚುನಾವಣಾ ಕರ್ತವ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ಸಂವಿಧಾನತ್ಮಕವಾಗಿ ಕೆಲಸ ಮಾಡಬೇಕು ಎಂದರು.


ಜಿಲ್ಲಾಧಿಕಾರಿ ಡಾ.ಬಿ.ಸತೀಶ ಮಾತನಾಡಿ, ಈಗಾಗಲೇ ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಕೈಗೊಳ್ಳಲಾಗಿದೆ. ೨೫೦ ಹಾಡಿಗಳು ಸೇರಿದಂತೆ ಎಲ್ಲಾ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಗೆ ೧೮ ವರ್ಷ ಮೇಲ್ಪಟ್ಟ ಎಲ್ಲರೂ ಹೆಸರು ಸೇರ್ಪಡೆ ಮಾಡಬೇಕು. ಯಾರಾದರೂ ನಿಧನರಾಗಿದ್ದಲ್ಲಿ ಹೆಸರು ತೆಗೆಯುವುದು ಮತ್ತಿತರ ಕಾರ್ಯಗಳು ನಡೆದಿವೆ. ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಮನೆ ಮನೆಗೆ ಭೇಟಿ ನೀಡಿ ಸರ್ವೇ ಕಾರ್ಯ ಮಾಡಲಾಗಿದೆ. ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಸರ್ವಿಸ್ ಓಟರ್ಸ್‌ಗಳ ಸಂಖ್ಯೆ ಹೆಚ್ಚಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.


ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ ಉಳ್ಳಾಲ್, ತಹಶೀಲ್ದಾರರಾದ ಅರ್ಚನಾ ಭಟ್, ಪ್ರಕಾಶ್, ಪ್ರಶಾಂತ್ ಅವರು ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧಿಸಿದಂತೆ ಇದುವರೆಗೆ ಕೈಗೊಳ್ಳಲಾಗಿರುವ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ.ಅಯ್ಯಪ್ಪ, ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಡಿವೈಎಸ್‌ಪಿ ಗಜೇಂದ್ರ ಪ್ರಸಾದ್, ಐಟಿಡಿಪಿ ಇಲಾಖಾ ಅಧಿಕಾರಿ ಎಸ್.ಹೊನ್ನೇಗೌಡ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ಉಪ ತಹಶೀಲ್ದಾರರು, ಕಂದಾಯ ನಿರೀಕ್ಷಕರು ಇತರರು ಇದ್ದರು.


ರಾಜಕೀಯ ಮುಖಂಡರ ಜತೆ ಚರ್ಚೆ: ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ಮತದಾರರ ಪಟ್ಟಿ ವೀಕ್ಷಕ ವಿ.ಅನ್ಬುಕುಮಾರ್‌ರವರು ಸೋಮವಾರ ಚರ್ಚಿಸಿದರು. ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಪ್ರತೀ ಮತಗಟ್ಟೆವಾರು ಯುವ ಮತದಾರರ ಹೆಸರು ಸೇರ್ಪಡೆ, ವಲಸೆ ಹೋಗಿದ್ದಲ್ಲಿ ಮಾಹಿತಿ ನೀಡುವುದು, ಯಾರಾದರೂ ನಿಧನ ಹೊಂದಿದ್ದಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆಯುವುದು ಮತ್ತಿತರ ಸಂಬಂಧ ಬಿಎಲ್‌ಒಗಳಿಗೆ ಮಾಹಿತಿ ನೀಡುವಂತೆ ಕೋರಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ೧೮ ವರ್ಷ ಮೇಲ್ಪಟ್ಟವರನ್ನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಬೂತ್ ಮಟ್ಟದಲ್ಲಿ ಸಹಕರಿಸುವಂತೆ ಕೋರಿದರು. ರಾಜಕೀಯ ಪಕ್ಷದ ಪ್ರಮುಖರಾದ ಅಪ್ಪಣ್ಣ(ಬಿಜೆಪಿ), ತೆನ್ನಿರಾ ಮೈನಾ(ಕಾಂಗ್ರೆಸ್), ರಮೇಶ್(ಸಿಪಿಐ(ಎಂ), ಮಹಮದ್(ಬಿಎಸ್‌ಪಿ) ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net