ಗಣತಿದಾರರಿಗೆ ನಿಖರ ಮಾಹಿತಿ ನೀಡಿ

5blrp3-m.r.venktesh
ಎಂ.ಆರ್.ವೆಂಕಟೇಶ್
Published on

ಬೇಲೂರು: ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿಗಾಗಿ ಜಾತಿ ಜನಗಣತಿ ಪ್ರಾರಂಭವಾಗಿದ್ದು, ಪರಿಶಿಷ್ಟ ಜಾತಿಯ ಉಪ ಪಂಗಡಗಳ ಸದಸ್ಯರು ಗಣತಿದಾರರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಹೇಳಿದರು.

ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಸಮ್ಮತವಾಗಿ ಎಲ್ಲ ಕ್ಷೇತ್ರದಲ್ಲೂ ಮೀಸಲು ವರ್ಗೀಕರಣಕ್ಕೆ ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಮುಂದಾಗಿದ್ದು, ಅದರಂತೆ ಸೋಮವಾರದಿಂದ ಪರಿಶಿಷ್ಟ ಜಾತಿಯ ಒಳ ಪಂಗಡಗಳ ಜಾತಿ ಗಣತಿ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಳಮೀಸಲಾತಿ ವರ್ಗೀಕರಣದಲ್ಲಿ ಪರಿಶಿಷ್ಟ ಜಾತಿಯಲ್ಲಿ 101 ಜಾತಿ ಉಪ ಪಂಗಡಗಳಿವೆ. ಇಲ್ಲಿ ಸರ್ಕಾರ ಜನ ಸಮುದಾಯಕ್ಕೆ ತಕ್ಕಂತೆ ಮೀಸಲಾತಿ ಕಲ್ಪಿಸಲು ಜಾತಿ ಗಣತಿ ಮಾಡಿಸುತ್ತಿದೆ. ಗಣತಿಗಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆಗಳಿಗೆ ಬಂದ ಸಂದರ್ಭ ಪರಿಶಿಷ್ಟ ಜಾತಿಯಲ್ಲಿನ ಉಪ ಪಂಗಡಗಳವರು ಯಾವುದೇ ಗೊಂದಲಕ್ಕೊಳಗಾಗದೆ ಸರಿಯಾಗಿ ತಮ್ಮ ತಮ್ಮ ಜಾತಿಯ ಮಾಹಿತಿ ಕೊಟ್ಟರೆ ಆಯಾ ಜನಾಂಗದವರು ಎಷ್ಟಿದ್ದಾರೆ, ಎಷ್ಟು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಬಲರಿದ್ದಾರೆ ಎಂಬುದನ್ನು ಬರೆಸಬೇಕು. ಇದರಿಂದ ಜನಾಂಗಕ್ಕೆ ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಸರ್ಕಾರಗಳಿಂದ ಸಿಗುವ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗುತ್ತದೆ. ಆದ್ದರಿಂದ ಉಪ ಪಂಗಡಗಳ ಪ್ರತಿಯೊಬ್ಬರು ಜನ ಗಣತಿಗೆ ಸಹಕಾರ ನಿಡಬೇಕು ಎಂದು ತಿಳಿಸಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ದೇವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net