

ಕಂಪ್ಲಿ: ನಿವೇಶನ, ವಸತಿ ಸೇರಿ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನಿಂದ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್‌ಗೆ ಮನವಿ ಸಲ್ಲಿಸಲಾಯಿತು.
ಫೆಡರೇಷನ್ ತಾಲೂಕು ಅಧ್ಯಕ್ಷ ಐ.ಹೊನ್ನೂರ್‌ಸಾಬ್ ಮಾತನಾಡಿ, ಕಟ್ಟಡ, ಎಲೆಕ್ಟ್ರಿಷಿಯನ್, ಪೇಂಟರ್, ಪಿಒಪಿ, ಟೈಲ್ಸ್, ಇಟ್ಟಂಗಿ ಬಟ್ಟಿ ಕಾರ್ಮಿಕರು, ಬಡಿಗ ಹಾಗೂ ಎಲ್ಲ ಸಮುದಾಯದ ಇತರೆ ಕಾರ್ಮಿಕರು ಸ್ವಂತ ನಿವೇಶನ, ಮನೆಗಳಿಲ್ಲದೆ ಪರಿತಪಿಸುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಲಕ್ಷಾಂತರ ರೂ. ವ್ಯಯಿಸಿ ನಿವೇಶನ ಕೊಳ್ಳಲು ಆರ್ಥಿಕ ಶಕ್ತಿ ಹೊಂದಿಲ್ಲ. ಪುರಸಭೆ ಆಡಳಿತ ನಿವೇಶನ, ವಸತಿ ಸೌಲಭ್ಯ ಕಲ್ಪಿಸಲು ವಾರ್ಡ್ ಮಟ್ಟದ ಅರ್ಹ ಫಲಾನುಭವಿಗಳ ಆಯ್ಕೆ ಪಟ್ಟಿ ಪ್ರಕಟಿಸುವಂತೆ ಒತ್ತಾಯಿಸಿದರು.
ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಮನವಿ ಸ್ವೀಕರಿಸಿ, ಶಾಸಕರು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಪ್ರಮುಖರಾದ ಆರ್.ನಾಗರಾಜ, ಬಂಡಿ ಬಸವರಾಜ, ಜೆ.ಸತ್ಯಬಾಬು, ಯಲ್ಲಾಲಿಂಗ, ಎಚ್.ಹೊನ್ನಮ್ಮ, ಎಚ್.ಗಂಗಮ್ಮ, ಕೆ.ಮಂಜು, ಮೈಬು, ಎಂ.ನೂರು, ಕೇದಾರನಾಥ, ನರಸಿಂಹ, ರುದ್ರಪ್ಪ, ಕೊನ್ನಾಪುರ ನಾಗರಾಜ, ಅಂಜಿನಮ್ಮ, ಪೇಂಟರ್ ನಾಗರಾಜ, ಎಲೆಕ್ಟ್ರಿಷಿಯನ್ ಚಂದ್ರಶೇಖರ್ ಹಾಗೂ ಕಾರ್ಮಿಕರಿದ್ದರು.