

ಚನ್ನರಾಯಪಟ್ಟಣ: ಒಕ್ಕಲಿಗರ ಸಂಘಕ್ಕೆ ಶೈಕ್ಷಣಿಕ ಉದ್ದೇಶಕ್ಕಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ನಿವೇಶನಗಳನ್ನು ಮಂಜೂರು ಮಾಡುವಂತೆ ಮಂಗಳವಾರ ಶಾಸಕ ಸಿ.ಎನ್.ಬಾಲಕೃಷ್ಣ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಅವರಿಗೆ ಮನವಿ ಮಾಡಿದರು.
ಬೆಂಗಳೂರಿನ ಗೃಹ ಕಚೇರಿಯಲ್ಲಿ ಸಚಿವ ಎಂ.ಬಿ ಪಾಟೀಲ್ ಅವರನ್ನು ಶಾಸಕರು ಭೇಟಿ ಮಾಡಿ, ಹಲವು ವಿಚಾರಗಳನ್ನು ಕುರಿತು ಚರ್ಚೆ ನಡೆಸಿದರು. ರಾಜ್ಯ ಒಕ್ಕಲಿಗರ ಸಂಘವು ಸಮಾಜದ ಉನ್ನತಿಗಾಗಿ 1906ರಲ್ಲಿ ಸ್ಥಾಪಿಸಲ್ಪಟ್ಟಿದ್ದು, ಈ ಸಂಘವು ಚಾರಿಟಬಲ್ ಸಂಸ್ಥೆಯಾಗಿದ್ದು ತನ್ನ ಮೂಲ ಉದ್ದೇಶಗಳನ್ನು ಸಹಕಾರಗೊಳಿಸಲು ವೈದ್ಯಕೀಯ, ದಂತ ವೈದ್ಯಕೀಯ, ನರ್ಸಿಂಗ್, ಫಿಸಿಯೋಥೆರಪಿ, ಕಾನೂನು, ಪದವಿಪೂರ್ವ, ಸ್ನಾತಕೋತ್ತರ ಕಾಲೇಜು ಸೇರಿದಂತೆ ಇನ್ನಿತರ ಶಾಲಾ-ಕಾಲೇಜು, ಹಾಸ್ಟೆಲ್‌ಗಳನ್ನು ನಡೆಸಿಕೊಂಡು ಬರುತ್ತಿದೆ. ವಿವಿಧ ಶಾಲಾ-ಕಾಲೇಜುಗಳನ್ನು ಸ್ಥಾಪಿಸಿ, ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ವಿದ್ಯಾಭ್ಯಾಸವನ್ನು ನೀಡುತ್ತಿರುವುದಲ್ಲದೆ, ವಸತಿ ನಿಲಯಗಳನ್ನು ಸ್ಥಾಪಿಸಿ ಉಚಿತವಾಗಿ ಸ್ಥಳಾವಕಾಶ ಹಾಗೂ ಊಟೋಪಚಾರ ನೀಡುತ್ತಾ ಬಂದಿದೆ ಎಂದು ತಿಳಿಸಿದ್ದಾರೆ.
ಸಂಘವು ಸೇವಾ ಸಂಸ್ಥೆಯಾಗಿದ್ದು ಲಾಭದ ದೃಷ್ಟಿ ಹೊಂದಿರುವುದಿಲ್ಲ. ಕಿಮ್ಸ್ ಆಸ್ಪತ್ರೆಯಲ್ಲಿ ಕಡು ಬಡವರಿಗೆ ಹಾಗೂ ಗ್ರಾಮೀಣ ಭಾಗದ ಜನರಿಗೆ ಚಿಕಿತ್ಸಾ ವೆಚ್ಚದಲ್ಲಿ ಶೇ.25ರಷ್ಟು ವಿನಾಯಿತಿ ನೀಡಲಾಗುತ್ತಿದೆ. ಈ ಸೇವೆಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೂ ವಿಸ್ತರಿಸಲು ರಾಜ್ಯ ಒಕ್ಕಲಿಗರ ಸಂಘಕ್ಕೆ ಸ್ಥಳಾವಕಾಶದ ಅವಶ್ಯಕತೆ ಇದೆ. ಆದ್ದರಿಂದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಸಿ.ಎ ನಿವೇಶನಗಳಿಗೆ ಅರ್ಜಿ ಆಹ್ವಾನಿಸಿದ್ದು, ನಮ್ಮ ಸಂಘದ ವತಿಯಿಂದ ಅರ್ಜಿ ಸಲ್ಲಿಸಲಾಗಿದೆ. ಸಂಸ್ಥೆಯ ವತಿಯಿಂದ ಎಲ್ಲ ಸಮುದಾಯಕ್ಕೆ ಇನ್ನು ಹೆಚ್ಚಿನ ಸೇವೆ ನೀಡಲು ಅನುವಾಗುವಂತೆ ನಿವೇಶನಗಳನ್ನು ರಾಜ್ಯ ಒಕ್ಕಲಿಗರ ಸಂಘಕ್ಕೆ ಮಂಜೂರು ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು.
ಶಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು, ನಿವೇಶನಗಳನ್ನು ರಾಜ್ಯ ಒಕ್ಕಲಿಗರ ಸಂಘಕ್ಕೆ ಮಂಜೂರು ಮಾಡಿಕೊಡುವುದಾಗಿ ಭರವಸೆ ನೀಡಿದರು. ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಕೋನಪ್ಪ ರೆಡ್ಡಿ ಇದ್ದರು.