

ಮೂಡಿಗೆರೆ: ಟೈಲರ್ಸ್ ಸಂಘಟನೆಗೆ ಸಮುದಾಯ ಭವನ ನಿರ್ಮಿಸಲು ಪಟ್ಟಣ ಪಂಚಾಯಿತಿ ನಿವೇಶನ ಒದಗಿಸಿಕೊಡಬೇಕು ಎಂದು ತಾಲೂಕು ಟೈಲರ್ ಸಂಘದ ಅಧ್ಯಕ್ಷ ಎಚ್.ಎಂ.ಶಿವೇಗೌಡ ಒತ್ತಾಯಿಸಿದರು.
ಸಂಘಟನೆಯಿಂದ ಪಪಂ ಅಧ್ಯಕ್ಷೆ ಗೀತಾ ರಂಜನ್ ಅಜಿತ್‌ಕುಮಾರ್, ಉಪಾಧ್ಯಕ್ಷ ಹೊಸಕೆರೆ ರಮೇಶ್, ಸದಸ್ಯ ಕೆ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ತಾಲೂಕಿನಲ್ಲಿ ಟೈಲರ್ ವೃತ್ತಿದಾರರು ಹೆಚ್ಚಾಗಿದ್ದಾರೆ. ಹೊಸದಾಗಿ ಟೈಲರ್ ವೃತ್ತಿ ಆರಂಭಿಸುವವರಿಗೆ ಸಂಘದಿಂದ ಹೊಲಿಗೆ ಯಂತ್ರ ಉಚಿತವಾಗಿ ನೀಡಿದ್ದೇವೆ. ಸಂಘಟನೆಗೆ ಭವನ ಇಲ್ಲದ ಕಾರಣ ಯಾವುದೇ ಕಾರ್ಯಕ್ರಮ ನಡೆಸಲು ಕಷ್ಟವಾಗಿದೆ. ಟೈಲರ್ ಸಂಘಟನೆಯಿಂದ ಇದುವರೆಗೆ ಜನಪ್ರತಿನಿಧಿಗಳ ಬಳಿ ಯಾವುದೆ ಸವಲತ್ತಿಗೂ ಬೇಡಿಕೆ ಇಟ್ಟಿಲ್ಲ. ಈಗ ಹೊಸದಾಗಿ ಮನವಿ ನೀಡುತ್ತಿದ್ದೇವೆ. ಸಮುದಾಯ ಭವನಕ್ಕೆ ಬೇಕಾದ ಜಾಗದ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು. ಪಪಂ ನೂತನ ಅಧ್ಯಕ್ಷೆ ಗೀತಾ ರಂಜನ್ ಅಜಿತ್‌ಕುಮಾರ್, ಉಪಾಧ್ಯಕ್ಷ ಹೊಸಕೆರೆ ರಮೇಶ್ ಅವರನ್ನು ಸನ್ಮಾನಿಸಿದರು.
ಉಪಾಧ್ಯಕ್ಷ ಎಂ.ಕೆ.ಷಣ್ಮುಖಾನಂದ, ಪದಾಧಿಕಾರಿಗಳಾದ ಗಿರೀಶ್, ಲೋಲಾಕ್ಷಿ, ತೀರ್ಥ, ಪ್ರದೀಪ್, ಸತೀಶ್, ನರಸಿಂಹ ಇತರರಿದ್ದರು.