ಪ್ರವಾಹ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಿ

7-pnp 1
ಪಾಂಡವಪುರ ತಾಲೂಕಿನ ಪ್ರವಾಹ ಪೀಡಿತ ಗ್ರಾಮ ಎಣ್ಣೆಹೊಳೆಕೊಪ್ಪಲು ಗ್ರಾಮಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಸಚಿವ ಬೋಸರಾಜು ಅವರಿಗೆ ಮನವಿ ಸಲ್ಲಿಸಿದರು. ಎ.ಎಲ್.ಕೆಂಪೂಗೌಡ, ಹರವು ಪ್ರಕಾಶ್, ಎಣ್ಣೆಹೊಳೆಕೊಪ್ಪಲು ವೈ.ಪಿ.ಮಂಜು, ವೈ.ಜಿ.ರಘು ಇತರರು ಇದ್ದರು.
Published on

ಪಾಂಡವಪುರ: ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗಿ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದಾಗಲೆಲ್ಲ ಪ್ರವಾಹ ಭೀತಿ ಎದುರಾಗುತ್ತಿದ್ದು, ಶಾಶ್ವತ ಪರಿಹಾರ ಮತ್ತು ತಡೆಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮಸ್ಥರು ಮತ್ತು ರೈತ ಮುಖಂಡರು ಸಣ್ಣ ನೀರಾವರಿ ಇಲಾಖೆ ಸಚಿವ ಬೋಸರಾಜು ಅವರಿಗೆ ಮನವಿ ಮಾಡಿದರು.

ವಿಧಾನಸೌಧದ ಸಚಿವರ ಕೊಠಡಿಯಲ್ಲಿ ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡರ ನೇತೃತ್ವದಲ್ಲಿ ಬುಧವಾರ ಸಚಿವರನ್ನು ಭೇಟಿ ಮಾಡಿದ ಗ್ರಾಮಸ್ಥರು ಅಗತ್ಯ ಕ್ರಮಕ್ಕೆ ಮನವಿ ಸಲ್ಲಿಸಿದರು.

ನದಿಗೆ ಹೊಂದಿಕೊಂಡಂತಿರುವ ಎಣ್ಣೆಹೊಳೆಕೊಪ್ಪಲು ಗ್ರಾಮಕ್ಕೆ ಈ ಹಿಂದೆ ತಡೆಗೋಡೆ ನಿರ್ಮಿಸಲಾಗಿದೆಯಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲವು ಕಡೆ ಕಾಮಗಾರಿ ಅಪೂರ್ಣಗೊಂಡಿರುವ ಪರಿಣಾಮ ಪ್ರವಾಹ ಎದುರಾದಗಲೆಲ್ಲ ಈ ಭಾಗದಿಂದ ಗ್ರಾಮಕ್ಕೆ ನೀರು ನುಗ್ಗಿ ಗ್ರಾಮ ಜಲಾವೃತವಾಗುತ್ತಿದೆ. ಜತೆಗೆ ಜಮೀನುಗಳಿಗೂ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟ ಸಂಭವಿಸುತ್ತಿದೆ. ಅಣೆಕಟ್ಟೆಯಿಂದ ನೀರು ಬಿಟ್ಟಾಗಲೆಲ್ಲ ಜನ ಆತಂಕದಲ್ಲಿ ಬದುಕಬೇಕಿದೆ. ಮಳೆ ಸುರಿದಾಗ ಮತ್ತು ತ್ಯಾಜ್ಯದ ನೀರು ನದಿಗೆ ಸೇರಲು ತಡೆಗೋಡೆಗೆ ರಂಧ್ರ ಕೊರೆದಿಲ್ಲ. ಹೀಗಾಗಿ ನೀರು ಶೇಖರಣೆಯಾಗಿ ಇಡೀ ಗ್ರಾಮ ಕೊಳಚೆ ಪ್ರದೇಶದಂತಾಗುತ್ತಿದೆ. ತಕ್ಷಣ ಅಗತ್ಯ ಕ್ರಮ ವಹಿಸುವಂತೆ ಮನವಿ ಮಾಡಿಕೊಂಡರು.

ಗ್ರಾಮಸ್ಥರ ಮನವಿ ಆಲಿಸಿದ ಸಚಿವ ಬೋಸರಾಜು ಅವರು ಪ್ರವಾಹ ತಡೆಗಟ್ಟಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರಲ್ಲದೇ, ತಕ್ಷಣ ಅಗತ್ಯ ಕ್ರಮ ಕಗೊಳ್ಳುವಂತೆ ಹಾಗೂ ಕಾಮಗಾರಿಯ ಅಂದಾಜು ಪಟ್ಟಿ ಸಲ್ಲಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಂಘದ ಪದಾಧಿಕಾರಿಗಳಾದ ಹರವು ಪ್ರಕಾಶ್, ಎಣ್ಣೆಹೊಳೆಕೊಪ್ಪಲು ವೈ.ಪಿ.ಮಂಜು, ವೈ.ಜಿ.ರಘು, ಗೋವಿಂದರಾಜು, ವಿಜಯಕುಮಾರ್, ಜಯರಾಮು, ಅಣ್ಣಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net