

ಆನೇಕಲ್: ಸೋಂಕಿತರಿಗೆ ಚಿಕಿತ್ಸೆ, ಧೈರ್ಯ, ಉತ್ತಮ ವಾತಾವರಣ ನೀಡಿದರೆ ಬೇಗ ಗುಣಮುಖರಾಗುತ್ತಾರೆ. ಈ ಕೆಲಸ ಎಲ್ಲ ಕೋವಿಡ್ ಕೇಂದ್ರಗಳಲ್ಲೂ ಆಗಬೇಕಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದರು.
ತಾಲೂಕಿನ ಹುಲಿಮಂಗಲದಲ್ಲಿ ಅಗರ್‌ವಾಲ್ ಸಮಾಜದಿಂದ ನಿರ್ಮಿಸಿರುವ ಕೋವಿಡ್ ಕೇರ್ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿ ಮಾತನಾಡಿದರು.
ಅಗರ್‌ವಾಲ್ ಸಮಾಜದಿಂದ ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದ ಹುಲಿಮಂಗಲದಲ್ಲಿ 35 ಹಾಸಿಗೆಗಳ ಕೋವಿಡ್‌ಕೇರ್ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ಶೌಚಗೃಹ ವ್ಯವಸ್ಥೆ ಸೇರಿ ವಿವಿಧ ಸೌಲಭ್ಯಗಳನ್ನು ಸಮಾಜದ ವತಿಯಿಂದ ಕಲ್ಪಿಸಲಾಗಿದೆ. ವೈದ್ಯರು ಮತ್ತು ನರ್ಸ್‌ಗಳ ಸೇವೆಯನ್ನು ಸರ್ಕಾರದಿಂದ ನೀಡಲಾಗುವುದು. ಉಳಿದಂತೆ ಕೇಂದ್ರವನ್ನು ಅಗರ್ವಾಲ್ ಸಮಾಜ ನಿರ್ವಹಿಸುತ್ತದೆ ಎಂದರು.
ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡಿದೆ. ಈ ಅವಧಿಯಲ್ಲಿ ನೆರೆ, ಬರ, ಕರೊನಾದಂತಹ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲಾಗಿದೆ. ಮುಂಬರುವ ದಿನಗಳಲ್ಲಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಅಗರ್‌ವಾಲ್ ಸಮಾಜದ ಅಧ್ಯಕ್ಷ ಸಂಜಯ್ ಗರ್ಗ್ ಮಾತನಾಡಿ, 35 ಹಾಸಿಗೆಗಳ ಸೌಲಭ್ಯವನ್ನು ಕಲ್ಪಿಸಲಾಗಿದೆ. ಮುಂಬರುವ ದಿನಗಳಲ್ಲಿ 200 ಹಾಸಿಗೆಗಳ ಸೌಲಭ್ಯ ನೀಡಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಜಿಗಣಿಯ ನಿತ್ಯಾನಂದ ಶಾಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಕರೊನಾ ಸಂದರ್ಭದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಜಿಗಣಿ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ತಾಪಂ ಅಧ್ಯಕ್ಷೆ ಕವಿತಾ ಸಂಪತ್, ತಹಸೀಲ್ದಾರ್ ಸಿ.ಮಹಾದೇವಯ್ಯ, ಜಿಗಣಿ ಪೊಲೀಸ್ ವೃತ್ತನಿರೀಕ್ಷಕ ಕೆ.ವಿಶ್ವನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್.ರಾಮಮೂರ್ತಿ, ತಾಲೂಕು ವೈದ್ಯಾಧಿಕಾರಿ ಡಾ.ಜ್ಞಾನಪ್ರಕಾಶ್, ಜಿಗಣಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಲತಾ, ಅಗರ್ವಾಲ್ ಸಮಾಜದ ಸಂಜೀವ್ ಗೋಯಲ್, ಕುನಾಲ್ ಗೋಯಲ್, ಬಿಜೆಪಿ ಮಂಡಲ ಅಧ್ಯಕ್ಷ ರಾಜಶೇಖರರೆಡ್ಡಿ, ಮುಖಂಡರಾದ ಕೊಪ್ಪ ಮುನಿರಾಜು ಇತರರಿದ್ದರು.