ಗಾದೆ ಮಾತುಗಳು ಸಾರ್ವಕಾಲಿ ಸತ್ಯ

1 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಗಾದೆ ಮಾತುಗಳು ಸಾರ್ವಕಾಲಿಕ ಸತ್ಯಗಳಾಗಿದ್ದು, ಅವುಗಳು ಎಲ್ಲ ಕಾಲಕ್ಕೂ, ಎಲ್ಲ ಪ್ರದೇಶಗಳಿಗೂ ಅನ್ವಯಿಸುತ್ತವೆ. ವೇದ ಸುಳ್ಳಾದರೂ, ಗಾದೆ ಸುಳ್ಳಾಗುವುದಿಲ್ಲ ಎಂದು ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಡಿ. ಬಿ. ಕರಡೋಣಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಆನಂದ ಚಿಗಟೇರಿ ದತ್ತಿ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ಗಾದೆ ಮಾತು ಆಧರಿಸಿ ಕತೆ ಹೇಳುವ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಧ್ಯಾಪಕಿ ಡಾ. ಸುಮಂಗಲಾ ಮರಡಿ ಮಾತನಾಡಿ, ಗಾದೆ ಮಾತುಗಳು ನಮ್ಮ ಮುಂದೆ ಜೀವನಾನುಭವ ತೆರೆದಿಡುತ್ತವೆ. ಅವುಗಳು ಸಾಹಿತ್ಯವನ್ನು ಶ್ರೀಮಂತಗೊಳಿಸಿ ಜನರನ್ನು ಎಚ್ಚರಿಸುತ್ತವೆ ಎಂದರು.
ಡಾ. ವಿಜಯಲಕ್ಷ್ಮೀ ದಂಡಿನ ಮಾತನಾಡಿ, ಗಾದೆ ಮಾತುಗಳನ್ನು ಆಳಕ್ಕಿಳಿದು ಅರ್ಥೈಸುತ್ತಾ ಹೋದಂತೆ ಅವುಗಳ ಅನ್ವಯಿಸುವಿಕೆ ಹೆಚ್ವು ವಿಸ್ತಾರಗೊಳ್ಳುತ್ತಾ ಹೋಗುತ್ತದೆ ಎಂದರು.
ಸ್ಪರ್ಧೆಯಲ್ಲಿ ಧಾರವಾಡದ ತೇಜಸ್ವಿನಿ ಮಹಿಳಾ ಮಂಡಳದ ಜಯಶ್ರೀ ಗುತ್ತಲ ಪ್ರಥಮ, ಕದಳಿ ಮಹಿಳಾ ವೇದಿಕೆಯ ಜಯಶೀಲಾ ಹಿರೇಮಠ ದ್ವಿತೀಯ, ಮಹಿಳಾ ಬಸವ ಕೇಂದ್ರದ ಡಾ. ಪ್ರೇಮಾ ನಡಕಟ್ಟಿ ತೃತೀಯ ಹಾಗೂ ಮಂದಸ್ಮಿತ ಮಹಿಳಾ ಮಂಡಳದ ಸುನಿತಾ ಹೆಗಡೆ ಮತ್ತು ಅಕ್ಕಮಹಾದೇವಿ ಮಹಿಳಾ ಮಂಡಳದ ಮೈತ್ರೇಯಿಣಿ ನೇಕಾರ ಸಮಾಧಾನಕರ ಬಹುಮಾನ ಪಡೆದರು.
ದತ್ತಿದಾನಿ ಪರ ಡಾ. ವಿ.ಶಾರದಾ ಮಾತನಾಡಿದರು. ಶಿವಾನಂದ ಶೆಟ್ಟರ್, ಶಾರದಾ ಕೌದಿ, ನಿರ್ಮಲಾ ಮತ್ತು ಮಂಗಲಾ ಚಿಗಟೇರಿ, ಇತರರು ಇದ್ದರು. ಶಂಕರ ಕುಂಬಿ ಸ್ವಾಗತಿಸಿದರು. ಡಾ. ಶೈಲಜಾ ಅಮರಶೆಟ್ಟಿ ನಿರೂಪಿಸಿದರು. ಸತೀಶ ತುರಮರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net