

ಕೆ.ಆರ್.ಪೇಟೆ : ಸ್ಥಳೀಯ ಸಂಸ್ಥೆಗಳು ಹಾಗೂ ಮನ್‌ಮುಲ್ ಚುನಾವಣೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗದೇ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಮೂಲಕ ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಸದೃಢವಾಗಿದೆ ಎಂಬುದನ್ನು ನಿರೂಪಿಸಬೇಕಿದೆ ಎಂದು ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣಾ ಸಂಬಂಧ ಕಾರ್ಯಕರ್ತರೊಂದಿಗೆ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಶಿಸ್ತಿನ ಸಿಪಾಯಿಗಳಂತೆ ಕಾರ್ಯಕರ್ತರು ಇದ್ದಾರೆ. ಅವರಿಗೆ ಎಲ್ಲ ರೀತಿಯ ಸಹಕಾರ, ಬೆಂಬಲ ನೀಡಲು ನಾನು ಮತ್ತು ಪಕ್ಷ ಸಿದ್ಧರಿದ್ದೇವೆ. ಮುಖಂಡರುಗಳಲ್ಲಿ ಏನೇ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಕುಳಿತು ಮಾತನಾಡಿಕೊಂಡು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ಮುಂದೆ ನಮ್ಮ ಮುಂದೆ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಟಿಎಪಿಸಿಎಂಎಸ್, ಮನ್‌ಮುಲ್, ಸೊಸೈಟಿಗಳು, ಗ್ರಾಮಪಂಚಾಯಿತಿ, ಎಪಿಎಂಸಿ ಸೇರಿದಂತೆ ಸರಣಿ ಚುನಾವಣೆಗಳಿವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವನ್ನು ಬಲಪಡಿಸಿದರೆ ಎಲ್ಲರಿಗೂ ಅಧಿಕಾರ ಸಿಗಲಿದ್ದು, ಮುಂದಿನ ಐದು ವರ್ಷಗಳ ಕಾಲ ಅಧಿಕಾರವನ್ನು ಅನುಭವಿಸಬಹುದಾಗಿದೆ ಎಂದರು.
ಮನ್‌ಮುಲ್ ಚುನಾವಣೆಯ ಸಂಬಂಧ ಪಕ್ಷ ಈಗಾಗಲೇ ನನ್ನನ್ನು ಹಾಗೂ ಮಹೇಶ್ ಅವರನ್ನು ಅಭ್ಯರ್ಥಿಗಳೆಂದು ಪಕ್ಷದಲ್ಲಿ ಘೋಷಿಸಲಾಗಿದೆ. ಕೆಲವೊಬ್ಬರು ಪಕ್ಷದಲ್ಲಿ ಗೊಂದಲ ಮೂಡಿಸುವ ಪ್ರಯತ್ನದಲ್ಲಿದ್ದು ಸೋಲಿನ ಭೀತಿಯಿಂದ ಹೆದರಿಸಿ, ಬೆದರಿಸಿ ಚುನಾವಣೆಯಲ್ಲಿ ಗೆಲ್ಲಲು ನಾನಾ ತಂತ್ರಗಳನ್ನು ಅನುಸರಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಪಕ್ಷವಿರೋಧಿ ಚಟುವಟಿಕೆಯನ್ನು ನಾನು ಎಂದಿಗೂ ಸಹಿಸುವುದಿಲ್ಲ. ನನಗೂ ಶಕ್ತಿಯಿದೆ. ಆದರೆ ನೀವು ಕೊಟ್ಟಿರುವ ಆ ಶಕ್ತಿಯನ್ನು ಒಳ್ಳೆಯ ಕೆಲಸಗಳಿಗಾಗಿ ಮೀಸಲಿಟ್ಟಿದ್ದೇನೆ. ನಾನು ಮತ್ತು ಜೆಡಿಎಸ್ ಪಕ್ಷ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಅಭ್ಯಾಸ ನಮ್ಮದು ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮ್, ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಲೋಕೇಶ್, ಮನ್‌ಮುಲ್ ಅಭ್ಯರ್ಥಿ ಮಹೇಶ್, ಜೆಡಿಎಸ್ ಮುಖಂಡರಾದ ಹುಲ್ಲೇಗೌಡ, ರಾಮಚಂದ್ರೇಗೌಡ, ಸ್ವಾಮಿಗೌಡ, ತಾ.ಪಂ. ಮಾಜಿ ಸದಸ್ಯ ಮೋಹನ್, ತೋಟಪ್ಪಶೆಟ್ಟಿ, ವಕೀಲ ಧನಂಜಯ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.